ಬೆಳ್ತಂಗಡಿ: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಮಂಜ ಗ್ರಾಮದ ನಿಡಿಗಲ್ ಬಳಿ ಮನೆ ದರೋಡೆಗೆ ಯತ್ನಿಸಿದ್ದ ಪ್ರರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ತಾಲೂಕಿನ ಮೇಲ್ಕಾರ್ ಬಳಿಯ ಬಜಾಲ್ ಪಡ್ಪು ನಿವಾಸಿ ಪಿ.ಇರ್ಫಾನ್ (28), ಮಂಗಳೂರು ಅರ್ಕುಳ - ವಳಚ್ಚಿಲ್ ನಿವಾಸಿ ಮಹಮ್ಮದ್ ತೌಸೀಫ್ ಯಾನೆ ತಚ್ಚು (26), ಬೆಳಾಲು ಪರಾಳ ನಿವಾಸಿ ಚಿದಾನಂದ ಗೌಡ ಕಲ್ಮಂಜ (25), ಕಂದೂರು ನಿವಾಸಿ ಮೋಹನ (32) ಬಂಧಿತ ಆರೋಪಿಗಳು. ಬಂಧಿತರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.
ಪ್ರಕರಣ ಸಂಬಂಧ ಪೊಲೀಸರು ಶೀಘ್ರ ತನಿಖೆ ಕೈಗೊಂಡಿದ್ದು, ಸಿಪಿಐ ಬೆಳ್ತಂಗಡಿ ಮತ್ತು ಪಿಎಸ್‌ಐ ಧರ್ಮಸ್ಥಳ ಪೊಲೀಸ್ ಠಾಣೆ ಸಿಬ್ಬಂದಿಯನ್ನು ಒಳಗೊಂಡ ಎರಡು ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ. ಆರೋಪಿಗಳಿಂದ ಎರಡು ಕಾರು, ತಲವಾರ್, ಕಬ್ಬಿಣದ ರಾಡ್ ಹಾಗೂ ನಾಲ್ಕು ಮೊಬೈಲ್ ಸೇರಿದಂತೆ ಒಟ್ಟು 8 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕ ಬಿ.ಎಂ.ಲಕ್ಷ್ಮೀ ಪ್ರಸಾದ್ ಐಪಿಎಸ್ ಮಾರ್ಗದರ್ಶನದಂತೆ ಬಂಟ್ವಾಳ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ವೆಲೈಂಟೈನ್ ಡಿಸೋಜಾ ಅವರ ನಿರ್ದೇಶನದಂತೆ ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ., ಧರ್ಮಸ್ಥಳ ಠಾಣೆ ಪಿಎಸ್ಐಗಳಾದ ಪವನ್ ನಾಯಕ್ ಹಾಗೂ ಚಂದ್ರಶೇಖರ್ ಕೆ. ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.