ಕಡಬ (ದ.ಕನ್ನಡ): 94ಸಿ ಅಡಿ ಹಕ್ಕುಪತ್ರ ನೀಡಲಾದ ಜಮೀನಿನಲ್ಲಿದ್ದ ಮನೆಯನ್ನು ಏಕಾಏಕಿ ತೆರವುಗೊಳಿಸಿರುವ ಘಟನೆಯೊಂದು ಕಡಬ ತಾಲೂಕಿನ ಬಲ್ಯ ಗ್ರಾಮದ ಪಂಜಾಜೆ ಎಂಬಲ್ಲಿ ನಡೆದಿದೆ. ಈ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಕಂದಾಯ ಸಚಿವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಆರ್‌ಟಿಐ ಕಾರ್ಯಕರ್ತ ಮತ್ತು ನೀತಿ ತಂಡದ ರಾಜ್ಯಾಧ್ಯಕ್ಷ ಜಯನ್ ಟಿ. ಹೇಳಿದ್ದಾರೆ.
ಕಡಬದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಯನ್, ಲಕ್ಷ್ಮೀ ಎಂಬವರು ತನ್ನ ಮಕ್ಕಳೊಂದಿಗೆ ಕಳೆದ ಹಲವು ವರ್ಷಗಳಿಂದ ಕಡಬ ತಾಲೂಕಿನ ಬಲ್ಯ ಗ್ರಾಮದ ಪಂಜಾಜೆಯಲ್ಲಿರುವ ಸರ್ಕಾರಿ ಭೂಮಿಯಲ್ಲಿ ಮನೆ ಮಾಡಿಕೊಂಡು ವಾಸವಾಗಿದ್ದರು. ಈ ಜಾಗಕ್ಕೆ ಈಗಾಗಲೇ 94ಸಿ ಅಡಿಯಲ್ಲಿ ಹಕ್ಕು ಪತ್ರವನ್ನು ಸರ್ಕಾರದಿಂದ ನೀಡಲಾಗಿದೆ. ಕೆಲ ದಿನಗಳ ಹಿಂದೆ ಕಡಬ ತಹಶೀಲ್ದಾರರ ಕಚೇರಿಯಿಂದ ನೋಟೀಸ್ ಬಂದಿದ್ದು, ನೀವು ಸರ್ಕಾರಿ ಭೂಮಿಯಲ್ಲಿ ವಾಸಿಸುತ್ತಿದ್ದು ಸರಿಯಾದ ದಾಖಲೆಗಳನ್ನು ನೀಡಿ ಹಕ್ಕು ಪತ್ರ ಪಡೆಯಲಾಗಿಲ್ಲ. ಆದುದರಿಂದ ನಿಮ್ಮ ಮನೆಯನ್ನು ತೆರವು ಮಾಡಲಾಗುವುದು ಎಂದು ತಿಳಿಸಿದ್ದಾರೆ. ಅಲ್ಲದೆ ಮನೆಯನ್ನು ಅಧಿಕಾರಿಗಳ ಸಮ್ಮುಖದಲ್ಲಿ ನೆಲಸಮ ಮಾಡಲಾಗಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಲಾಗಿದೆ. ಲಕ್ಷ್ಮೀ ಅವರಿಗೆ ಈ ಬೇರೆ ಒಂದು ಮನೆ ಇದೆ. ಆದರೆ ಹಲವಾರು ವರ್ಷಗಳಿಂದ ಈ ಮನೆ ಹಾಗೂ ಜಾಗದ ವಿಚಾರ ಮಾನ್ಯ ನ್ಯಾಯಾಲಯದ ಅಧೀನದಲ್ಲಿದೆ.ಈ ಕಾರಣದಿಂದಾಗಿ ಆ ಮನೆಗೆ ವಿದ್ಯುತ್ ಸಂಪರ್ಕ ಸೇರಿದಂತೆ ಯಾವುದೇ ಮೂಲಭೂತ ಸೌಕರ್ಯಗಳು ಇಲ್ಲದೇ ಈ ಬಡ ಕುಟುಂಬ ವಂಚಿತವಾಗಿದೆ. ಈಗಾಗಲೇ ಈ ವಿಚಾರದಲ್ಲಿ ತುಂಬಾ ಹಣವನ್ನು ಈ ಕುಟುಂಬ ಕಳೆದುಕೊಂಡಿದೆ ಎನ್ನಲಾಗಿದೆ.
ಇದರಿಂದಾಗಿ 94ಸಿ ಯಲ್ಲಿ ಅರ್ಜಿ ಸಲ್ಲಿಸಲು ಈ ಕುಟುಂಬ ಮುಂದಾಗಿತ್ತು. ಅದಕ್ಕೆ ಹಕ್ಕು ಪತ್ರ ಪಡೆದ ಸಂತೋಷವು ಈ ಕುಟುಂಬದ್ದಾಗಿತ್ತು. ಆದರೆ ಇದೀಗ ಒಂದೆಡೆ ಹಕ್ಕು ಪತ್ರ ರದ್ದಾದರೆ, ಇನ್ನೊಂದೆಡೆ ಕಾನೂನು ತೊಡಕಿನಿಂದಾಗಿ ಮೂಲಭೂತ ಸೌಕರ್ಯಗಳಿಂದಲೂ ಈ ಕುಟುಂಬ ವಂಚಿತವಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಕಡಬ ಪೇಟೆ ಸೇರಿದಂತೆ ಈಗಾಗಲೇ ಹಲವಾರು ಕಡೆಗಳಲ್ಲಿ ಸರ್ಕಾರಿ ಭೂಮಿಯಲ್ಲಿನ ನಿರ್ಮಾಣಗಳನ್ನು ತೆರವು ಮಾಡಿರುವ ಕಂದಾಯ ಇಲಾಖೆ ಅವುಗಳನ್ನು ತಮ್ಮ ವಶಕ್ಕೆ ಪಡೆಯಲು ಮುಂದಾಗುತ್ತಿಲ್ಲ, ಆದರೆ ಈ ಬಡ ಮಹಿಳೆಯ ವಿಚಾರದಲ್ಲಿ ಮಾನವೀಯತೆ ರಹಿತ ನಿಲುವನ್ನು ಅಧಿಕಾರಿಗಳು ಮಾಡಿದ್ದಾರೆ ಎಂಬ ಆರೋಪವು ವ್ಯಕ್ತವಾಗಿದೆ.
ಒಟ್ಟಿನಲ್ಲಿ ಈ ವೃದ್ಧ ಮಹಿಳೆಯ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ನೀತಿ ಸಾಮಾಜಿಕ ಸಂಘಟನೆ ಆಗ್ರಹಿಸಿದೆ.