ಮಂಗಳೂರು: ಕರಾವಳಿಯಲ್ಲಿ ಮುಂಗಾರು ಪ್ರವೇಶವಾದ ಎರಡು ದಿನಗಳಲ್ಲೇ ಮಳೆ ತೀವ್ರತೆ ಹೆಚ್ಚಾಗಿದೆ. ಮತ್ತೊಂದೆಡೆ ಉಳ್ಳಾಲದಲ್ಲಿ ಕಡಲ್ಕೊರೆತ ಪರಿಣಾಮ ಮತ್ತಷ್ಟು ಹೆಚ್ಚಾಗಿದ್ದು, ಕಡಲತಡಿಯ ಜನರು ಕಂಗಾಲಾಗಿದ್ದಾರೆ.
ಮಳೆಯಿಂದಾಗಿ ಉಳ್ಳಾಲ ಸಮುದ್ರ ತೀರದಲ್ಲಿರುವ ಸಮ್ಮರ್ ಸ್ಯಾಂಡ್ ಬೀಚ್ ರೆಸಾರ್ಟ್ ಸಭಾಂಗಣ ಕುಸಿದಿದೆ. ಎರಡು ಮನೆಗಳು ಸಮುದ್ರ ಪಾಲಾಗಿದೆ. ಆ ಭಾಗದ ಅನೇಕ ಮನೆಗಳು ಅಪಾಯದಂಚಿನಲ್ಲಿವೆ. ಕಳೆದ ಕೆಲವು ದಿನಗಳಿಂದ ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ಎಡೆಬಿಡದೆ ಸುರಿವ ಗಾಳಿ - ಮಳೆಯಿಂದಾಗಿ ಕಡಲ್ಕೊರೆತದ ಆರ್ಭಟ ತೀವ್ರಗೊಂಡಿದೆ.
ಬಂಟ್ವಾಳದಲ್ಲಿ ಗುಡ್ಡ ಕುಸಿತ:
ಮಳೆಯ ತೀವ್ರತೆಗೆ ಹಲವು ಕಡೆಗಳಲ್ಲಿ ಅವಾಂತರ ಸೃಷ್ಟಿಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಮ್ಮುಂಜೆ ಬಳಿಯ ಕಲಾಯಿ ಎಂಬಲ್ಲಿ ಗುಡ್ಡವೊಂದು ಕುಸಿದಿರುವ ಪರಿಣಾಮ ರಸ್ತೆಗೆ ಮಣ್ಣು ಬಿದ್ದಿದೆ. ಇದರಿಂದ ಕೆಲಕಾಲ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದ್ದು, ಜೆಸಿಬಿ ಮೂಲಕ ಮಣ್ಣು ತೆರವು ಕಾರ್ಯ ನಡೆದಿದೆ.
ರೈಲ್ವೆ ಬ್ರಿಡ್ಜ್ ಕೆಳಗೆ ಮಣ್ಣು ಕುಸಿತ:
ನಗರದ ಪಡೀಲ್ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ರೈಲ್ವೆ ಬ್ರಿಡ್ಜ್ ಕೆಳಗೆ ಮಣ್ಣು ಕುಸಿದಿರುವ ಪರಿಣಾಮ ಕೆಲಕಾಲ ಸಂಚಾರಕ್ಕೆ ತೊಂದರೆಯಾಗಿದೆ. ತಕ್ಷಣ ಜೆಸಿಬಿ ಮೂಲಕ ಮಣ್ಣು ತೆರವು ಕಾರ್ಯಾಚರಣೆ ನಡೆದಿದ್ದು, ಬಳಿಕ ಸಂಚಾರ ಸುಗಮವಾಯಿತು.
ಕೆ.ಎಸ್.ರಾವ್ ರಸ್ತೆಯಲ್ಲಿ ಹರಿದ ನೀರು:
ನಗರದ ಕೆ.ಎಸ್. ರಾವ್ ರಸ್ತೆಯಲ್ಲಿ ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದ ಕಾರಣ ನೀರು ರಸ್ತೆಯಲ್ಲಿ ತುಂಬಿ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ಚರಂಡಿ ಕಾಮಗಾರಿಯನ್ನು ಸಮರ್ಪಕವಾಗಿ ನಡೆಸದ ಜಿಲ್ಲಾಡಳಿತದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.