ಬಂಟ್ವಾಳ(ದ.ಕ): ಭಾನುವಾರ ಬಂಟ್ವಾಳ ಸಹಿತ ದ.ಕ ಜಿಲ್ಲೆಯಾದ್ಯಂತ ಭಾರಿ ಮಳೆ ಸುರಿಯುತ್ತಿದ್ದು, ಲಾಕ್ಡೌನ್ ಹಿನ್ನೆಲೆಯಲ್ಲಿ ಬಂಟ್ವಾಳದಿಂದ ಪುಂಜಾಲಕಟ್ಟೆವರೆಗೆ ಸಾಗುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ವಿಘ್ನವುಂಟಾಗಿದೆ.
ಬಿ.ಸಿ.ರೋಡ್ನಿಂದ ಜಕ್ರಿಬೆಟ್ಟುವರೆಗಿನ ಕೆಲಸಗಳು ಸಂಪೂರ್ಣವಾಗದ ಕಾರಣ, ರಸ್ತೆಯಿಡೀ ಕೆಸರುಮಯವಾಗಿದೆ. ಲಾಕ್ಡೌನ್ನಿಂದ ಒಂದಷ್ಟು ಸಮಯ ಕಾಮಗಾರಿ ನಿಂತು ಹೋದ ಪರಿಣಾಮ ತೊಂದರೆಯುಂಟಾಗಿದೆ. ಜಕ್ರಿಬೆಟ್ಟುವರೆಗಿನ ಚತುಷ್ಪಥ ಹೆದ್ದಾರಿಯ ಒಂದು ಬದಿಯ 7 ಮೀ. ರಸ್ತೆ ಕೆಲಸ ಮಾಸಾಂತ್ಯದೊಳಗೆ ಮುಗಿಸಿ, ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಿದ್ದೇವೆ. ಬಳಿಕ ಮತ್ತೊಂದು ಬದಿಯ ಕಾಮಗಾರಿ ಮುಂದುವರಿಸುತ್ತೇವೆ ಎಂದು ಎಇಇ ರಮೇಶ್ ಹೇಳುತ್ತಾರೆ.
ಒಂದೆಡೆ ಧಾರಾಕಾರ ಮಳೆ ಸುರಿಯುತ್ತಿದ್ದು, ರಸ್ತೆಯನ್ನು ಮತ್ತಷ್ಟು ಹದಗೆಡಿಸಿದೆ. ಇದಲ್ಲದೆ, ಬಂಟ್ವಾಳ ತಾಲೂಕಿನ ಉಳಿದ ರಸ್ತೆಗಳ ಸ್ಥಿತಿಯೂ ಹದಗೆಡುತ್ತಿದ್ದು, ಹೀಗೆಯೇ ಮುಂದುವರಿದರೆ ಈ ಮಳೆಗಾಲ ರಸ್ತೆ ಬದಿ ನಿವಾಸಿಗಳಿಗೆ ದುಃಸ್ವಪ್ನವಾಗಿ ಕಾಡಿದರೆ ಅಚ್ಚರಿಯಿಲ್ಲ.
ಹೆದ್ದಾರಿಯ ಹಿಂದಿನ ಚಿತ್ರಣವನ್ನೇ ಬದಲಿಸಿ ಕಾಮಗಾರಿ ಸಾಗುತ್ತಿರುವುದರಿಂದ ಹಿಂದಿನ ಚರಂಡಿಗಳು ಮುಚ್ಚಿ ನೀರು ಹರಿಯುವುದಕ್ಕೂ ತೊಂದರೆಯುಂಟಾಗುತ್ತಿದೆ. ಬಂಟ್ವಾಳವೆಂದರೆ ಮೊದಲೇ ನೆರೆಬಾಧಿತ ಪ್ರದೇಶವಾಗಿದ್ದು, ಸ್ಥಳೀಯರು ಕೃತಕ ನೆರೆಯ ಆತಂಕದಲ್ಲಿದ್ದಾರೆ. ಹೆದ್ದಾರಿಯ ಕೆಸರು ಕೆಲವೊಂದೆಡೆ ಮನೆಗೆ ತೆರಳುವುದಕ್ಕೂ ಅಡ್ಡಿಯಾಗಿದೆ. ಬಿ.ಸಿ.ರೋಡ್ನಿಂದ ಜಕ್ರಿಬೆಟ್ಟುವರೆಗಿನ 3.85 ಕಿ.ಮೀ. ಅಂತರದಲ್ಲಿ ಚತುಷ್ಪಥ ಕಾಂಕ್ರೀಟ್ ಹೆದ್ದಾರಿ ನಿರ್ಮಾಣಗೊಳ್ಳಲಿದ್ದು, ಅದರ ಅಗಲ 14 ಮೀ. ಹೆದ್ದಾರಿ ಇಲಾಖೆಯು ಮಳೆಗಾಲಕ್ಕೆ ಮುಂಚಿತವಾಗಿ 7 ಮೀ. ಹೆದ್ದಾರಿಯ ಕಾಮಗಾರಿಯನ್ನು ಮುಗಿಸಿ ವಾಹನ ಸಂಚಾರಕ್ಕೆ ಮುಕ್ತಗೊಳಿಸುವ ಕುರಿತು ಗುತ್ತಿಗೆದಾರರಿಗೆ ಸೂಚನೆಯನ್ನೂ ನೀಡಿತ್ತು. ಆದರೆ ಲಾಕ್ಡೌನ್ ಪರಿಣಾಮದಿಂದ ನಿರೀಕ್ಷಿತ ಮಟ್ಟದಲ್ಲಿ ಕಾಮಗಾರಿ ಸಾಗಲಿಲ್ಲ.
ಮತ್ತೊಂದೆಡೆ ಜೂನ್ ಪ್ರಾರಂಭದಲ್ಲೇ ಮುಂಗಾರು ಆಗಮಿಸಿದೆ. ಹೀಗಾಗಿ ಜೂನ್ ಅಂತ್ಯದೊಳಗೆ 7 ಮೀ. ಅಗಲದ ಕಾಂಕ್ರೀಟ್ ಕಾಮಗಾರಿಯನ್ನು ಮುಗಿಸುವ ನಿಟ್ಟಿನಲ್ಲಿ ಕಾಮಗಾರಿ ಸಾಗುತ್ತಿದೆ ಎಂದು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಹೇಳುತ್ತಾರೆ.