ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಸುರಿಯುತ್ತಿದ್ದು, ಬಂಟ್ವಾಳ ತಾಲೂಕಿನ ಹಲವೆಡೆ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿದೆ.
ತಾಲೂಕಿನ ಪುಣಚ ಗ್ರಾಮದ ಮಲೆತಡ್ಕ ಸೇತುವೆಯ ಪಕ್ಕದ ಮಣ್ಣು ಸೇತುವೆ ಕುಸಿಯವ ಹಂತದಲ್ಲಿದೆ. ಪುಣಚ ಗ್ರಾಮದ ಸುಮಾರು 700ಕ್ಕಿಂತಲೂ ಅಧಿಕ ಮನೆಗಳಿಗೆ ಸಂಪರ್ಕ ಒದಗಿಸುವ ಈ ಸೇತುವೆ ಕೇರಳ ಕರ್ನಾಟಕವನ್ನು ಸಂಪರ್ಕಿಸುತ್ತದೆ. ಕಳೆದ ವರ್ಷದಿಂದ ಸೇತುವೆ ಸ್ವಲ್ಪ-ಸ್ವಲ್ಪವೇ ಬಿರುಕು ಬಿಟ್ಟಿದ್ದು, ಮಳೆಗಾಲದಲ್ಲಿ ಕುಸಿಯಲಾರಂಭಿಸಿದೆ. ಡಾಂಬರು ರಸ್ತೆ ಮತ್ತು ತಡೆಗೋಡೆಯೂ ಕುಸಿದು ಬಿದ್ದಿದೆ. ಈ ಹಿನ್ನೆಲೆಯಲ್ಲಿ ವಾಹನಗಳ ಸಂಚಾರವನ್ನು ನಿಷೇಧಿಸಲು ಸೂಚಿಸಿದ್ದು, ವಿಟ್ಲ ಪೊಲೀಸರು ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡಿದ್ದಾರೆ.
ಜೊತೆಗೆ ಬಿ.ಸಿ.ರೋಡ್ ಹಾಸನ ಹೆದ್ದಾರಿಯ ಇಕ್ಕೆಲಗಳಲ್ಲೂ ಮಣ್ಣು ರಸ್ತೆಗೆ ಹರಡಿದ್ದು, ಗುಂಡಿ ತುಂಬಿದ ರಸ್ತೆಯಲ್ಲಿ ಸಂಚರಿಸಲು ವಾಹನ ಸವಾರರು ಹರಸಾಹಸಪಡುತ್ತಿದ್ದಾರೆ. ಇನ್ನು, ಕುಳ ಗ್ರಾಮದ ಮುದಲೆಗುಂಡಿ ಎಂಬಲ್ಲಿ ಗೋಪಾಲ ಭಟ್ಟ ಎಂಬುವವರ ಅಡಿಕೆ ತೋಟಕ್ಕೆ ಮಳೆ ನೀರು ನುಗ್ಗಿ ಅಪಾರ ಹಾನಿ ಉಂಟಾಗಿದೆ.