ಬೆಳ್ತಂಗಡಿ: ಕೃಷಿಕರಿಗೆ ತಾವು ಬೆಳೆದ ಬೆಳೆಯನ್ನು ಕಾಡುಪ್ರಾಣಿಗಳಿಂದ ರಕ್ಷಿಸುವುದೇ ಒಂದು ದೊಡ್ಡ ಸವಾಲಾಗಿದೆ. ಪ್ರಕೃತಿ ವಿಕೋಪದಿಂದ ಕೃಷಿ ಹಾಳಾಗುವುದು ಒಂದೆಡೆಯಾದ್ರೆ, ಅದಕ್ಕಿಂತಲೂ ಹೆಚ್ಚಾಗಿ ಕಾಡು ಪ್ರಾಣಿಗಳ ಉಪಟಳದಿಂದ ಬೆಳೆಗಳನ್ನು ಕಾಪಾಡಿಕೊಳ್ಳಲು ಪರದಾಡುವ ಪರಿಸ್ಥಿತಿಯಿದೆ. ಇವುಗಳನ್ನು ಯಾವ ರೀತಿ ನಿಯಂತ್ರಿಸಬಹುದು ಎಂಬುದಕ್ಕೆ ಇಲ್ಲೊಬ್ಬರು ಒಂದು ವಿಶೇಷ ಕೋವಿಯನ್ನು ತಯಾರಿಸುತ್ತಿದ್ದಾರೆ.
ಬೆಳ್ತಂಗಡಿ ತಾಲೂಕು ಕರಿಮಣೇಲು ಗ್ರಾಮದ ಗಾಂಧಿನಗರ ಸಮೀಪದ ಗೋಪಾಲ ಆಚಾರ್ಯ ಮೂಲತಃ ಮರದ ಕೆಲಸ ಮಾಡುತ್ತಾರೆ. ಇವರು ತಯಾರಿಸಿದ ಕೋವಿ ನೋಡಲು ಅಸಲಿ ಕೋವಿಯಂತೆ ಕಂಡರೂ ಪ್ರಾಣಿಗಳನ್ನು ಓಡಿಸಲು ಸುಲಭವಾಗಿ ಬಳಸಬಹುದಾದ ಒಂದು ವಿಶೇಷ ಸಾಧನವಾಗಿದೆ. ಈ ಕೋವಿಯ ಬಳಕೆಯೂ ಸರಳವಾಗಿದೆ.
ಇದು ಕಾರ್ಯನಿರ್ವಹಿಸುವ ಬಗೆ ಹೀಗೆ..
ಈ ಕೋವಿಯೊಳಗೆ ಪಟಾಕಿ ಇಟ್ಟು ನಳಿಕೆಯೊಳಗೆ ಚಿಕ್ಕ ಚಿಕ್ಕ ಕಲ್ಲುಗಳನ್ನು ಹಾಕಿ ಪಟಾಕಿಗೆ ಬೆಂಕಿ ಹಚ್ಚಿದ ಕೂಡಲೇ ದೊಡ್ಡ ಶಬ್ದದೊಂದಿಗೆ ಆ ಕಲ್ಲುಗಳು ನಳಿಕೆಯಿಂದ ರಭಸವಾಗಿ ಹೊರ ಚೆಲ್ಲಲ್ಪಡುತ್ತವೆ. ಈ ದೊಡ್ಡ ಶಬ್ದಕ್ಕೆ ಹಾಗೂ ಚಿಕ್ಕ ಚಿಕ್ಕ ಕಲ್ಲು ಪ್ರಾಣಿಗಳ ಮೈಮೇಲೆ ಬೀಳುವುದರಿಂದ ಪ್ರಾಣಿಗಳು ಮತ್ತೆ ಇತ್ತಕಡೆ ಬರುವುದಕ್ಕೆ ಹೆದರುತ್ತವೆ. ಈ ಕೋವಿಯಿಂದ ಯಾವುದೇ ಪ್ರಾಣಿಗಳ ಜೀವಕ್ಕೆ ಅಪಾಯವಾಗುವುದಿಲ್ಲ. ಹಾಗಾಗಿ, ಕೃಷಿಕರಿಗೆ ಇದೊಂದು ಉತ್ತಮವಾದ ಸಾಧನ.
ಈ ಬಗ್ಗೆ ಈಟಿವಿ ಭಾರತದ ಜೊತೆ ಮಾತನಾಡಿದ ಗೋಪಾಲ ಆಚಾರ್ಯ, 'ನಾನು ಕಳೆದ 35 ವರ್ಷಗಳಿಂದ ಮರದ ಕೆಲಸ ಮಾಡಿಕೊಂಡು ಬರುತ್ತಿದ್ದೇನೆ. ಕಳೆದ ಕೆಲವು ವರ್ಷಗಳಿಂದ ಸ್ಥಳೀಯ ಕೆಲವು ಕೃಷಿಕರು ಕಾಡು ಪ್ರಾಣಿಗಳ ಹಾವಳಿಯಿಂದ ಅನುಭವಿಸುತ್ತಿರುವ ತೊಂದರೆಗಳ ಬಗ್ಗೆ ತಿಳಿದುಕೊಂಡಿದ್ದೆ. ಈ ಬಗ್ಗೆ ಯೋಚಿಸಿ ಒಂದು ವರ್ಷದಿಂದ ಈ ರೀತಿಯ ಕೋವಿ ತಯಾರಿಸುವ ಬಗ್ಗೆ ಚಿಂತನೆಯಲ್ಲಿದ್ದೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತನಾಗಿ ಕಳೆದ 6 ತಿಂಗಳ ಹಿಂದೆ ಒಂದೆರಡು ಕೋವಿಗಳನ್ನು ತಯಾರಿಸಿ ಸ್ಥಳೀಯ ಕೃಷಿಕರಿಗೆ ನೀಡಿದೆ. ಅವರು ಈ ಕೋವಿಯನ್ನು ಬಳಸಿ ಒಳ್ಳೆಯ ಅಭಿಪ್ರಾಯ ನೀಡಿದರಲ್ಲದೆ, ಅದರಿಂದ ತುಂಬಾ ಪ್ರಯೋಜನ ಆಗುತ್ತಿದೆ. ಪ್ರಾಣಿಗಳ ಬಾಧೆ ಕಡಿಮೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ' ಎಂದರು.
'ಇಲ್ಲಿಯವವರೆಗೆ ಸುಮಾರು ಕೋವಿಗಳನ್ನು ತಯಾರಿಸಿಕೊಟ್ಟಿದ್ದೇನೆ. ಇದಕ್ಕೆ ಉತ್ತಮ ದರ್ಜೆಯ ಪೈಪ್ ಹಾಗೂ ಇನ್ನಿತರ ವಸ್ತುಗಳು ಬೇಕಾಗುವುದರಿಂದ ಅಂದಾಜು 2,500ರಿಂದ 3,000 ರೂ ವೆಚ್ಚ ತಗುಲುತ್ತದೆ. ಕೋವಿ ಕೊಂಡು ಹೋದ ಎಲ್ಲರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅದಲ್ಲದೆ ರಾತ್ರಿ ಹೊತ್ತು ಹಂದಿಗಳ ಹಾವಳಿ ತಪ್ಪಿಸಲು ಕೂಡಾ ಇದನ್ನು ಉಪಯೋಗಿಸಬಹುದು' ಎಂದು ವಿವರಿಸಿದರು.
ಅರಣ್ಯ ಇಲಾಖೆ ಅಧಿಕಾರಿ ಪ್ರತಿಕ್ರಿಯೆ:
ಈ ಬಗ್ಗೆ ಈಟಿವಿಗೆ ಪ್ರತಿಕ್ರಿಯೆ ನೀಡಿದ ವೇಣೂರು ಅರಣ್ಯ ಇಲಾಖೆಯ ಅಧಿಕಾರಿ ಪ್ರಶಾಂತ್ ಪೈ, 'ಈ ಕೋವಿ ನಿಜವಾಗಲೂ ಕೃಷಿಕರಿಗೆ ತುಂಬಾ ಉಪಯೋಗಕ್ಕೆ ಬರುತ್ತಿದೆ. ಇದರಿಂದ ಪ್ರಾಣಿಗಳ ಜೀವಕ್ಕೇನೂ ಅಪಾಯವಿಲ್ಲ. ದೊಡ್ಡ ಶಬ್ದದೊಂದಿಗೆ ಚಿಕ್ಕ ಕಲ್ಲು ಪ್ರಾಣಿಗಳ ಮೇಲೆ ಬೀಳುವುದರಿಂದ ಪ್ರಾಣಿಗಳು ಹೆದರಿ ಓಡುತ್ತವೆ. ನಾನು ಈ ಕೋವಿಯನ್ನು ಉಪಯೋಗಿಸುತ್ತಿದ್ದೇನೆ. ಕಾಡು ಪ್ರಾಣಿಗಳ ತೊಂದರೆ ಅನುಭವಿಸುತ್ತಿರುವ ಕೃಷಿಕರು ಇದನ್ನು ಉಪಯೋಗಿಸಬಹುದು' ಎಂದಿದ್ದಾರೆ.
ನೋಡುವುದಕ್ಕೆ ಅಸಲಿ ಕೋವಿಯ ರೀತಿ ಇದರ ವಿನ್ಯಾಸವಿದೆ. ಅದಲ್ಲದೆ ಇದನ್ನು ತಯಾರಿಸಲು ಬಳಸಿದ ಪೈಪ್ ಹಾಗೂ ಇನ್ನಿತರ ವಸ್ತುಗಳು ಉತ್ತಮ ಗುಣಮಟ್ಟದ್ದಾಗಿದ್ದು ಯಾವುದೇ ಅಪಾಯ ಆಗುವ ಸಂಭವ ಕಡಿಮೆ. ಇದನ್ನು ಮಹಿಳೆಯರೂ ಕೂಡ ಬಳಸಬಹುದು. ಈ ಕೋವಿಗಳಿಗೆ ಈಗಾಗಲೇ ಹಲವೆಡೆಗಳಿಂದ ಬೇಡಿಕೆ ಬರುತ್ತಿದೆ.
ಈ ಕೋವಿ ಬೇಕಾದಲ್ಲಿ ಸಂಪರ್ಕಿಸಿ:
ಈ ಕೋವಿಯ ಬಗ್ಗೆ ಯಾರಿಗಾದರೂ ಮಾಹಿತಿ ಅಥವಾ ಕೋವಿ ಬೇಕಾದಲ್ಲಿ 9113508252 ನಂಬರ್ಗೆ ಕರೆ ಮಾಡಬಹುದು.