ಮಂಗಳೂರು: ನಗರದಲ್ಲಿ ಹರಿಯುತ್ತಿರುವ ಫಲ್ಗುಣಿ ನದಿಯು ಕಲುಷಿತಗೊಂಡಿದ್ದು, ಕಪ್ಪು ಬಣ್ಣಕ್ಕೆ ತಿರುಗಿದೆ. ನಗರದ ಹೊರವಲಯದಲ್ಲಿರುವ ಉಳಾಯಿಬೆಟ್ಟು, ಕಾರಮೊಗರು, ಏತಮೊಗರು ಮುಂತಾದ ಕಡೆಗಳಲ್ಲಿ ಈ ಬದಲಾವಣೆಯಾಗಿದ್ದು, ಪರಿಣಾಮ ಇದರಿಂದ ಸ್ಥಳೀಯರು ಆತಂಕಿತರಾಗಿದ್ದಾರೆ.
ಫಲ್ಗುಣಿ ನದಿ ತಟದಲ್ಲಿರುವ ಗೋಳಿದಡಿಗುತ್ತಿನ ಮುಹಾಕಾಲೇಶ್ವರ ದೇವರ ಉಜೈನಿ ತೀರ್ಥಬಾವಿಯ ನೀರು ಕಪ್ಪು ಬಣ್ಣಕ್ಕೆ ತಿರುಗಿದ್ದು, ಕಲುಷಿತ ರಾಸಾಯನಿಕಯುಕ್ತ ನೀರು ಬಂದು ಫಲ್ಗುಣಿ ನದಿಯನ್ನು ಸೇರುವುದೇ ಈ ಬದಲಾವಣೆಗೆ ಕಾರಣ ಎಂದು ಸ್ಥಳೀಯರು ಶಂಕಿಸುತ್ತಿದ್ದಾರೆ.
ನೀರು ಕಪ್ಪು ಬಣ್ಣಕ್ಕೆ ತಿರುಗಿದ್ದು ಮಾತ್ರವಲ್ಲ, ಹಳದಿ ಬಣ್ಣದ ನೊರೆ ಕಂಡು ಬರುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಜಲಚರಗಳಿಗೂ ಕಂಟಕ ಉಂಟಾಗಬಹುದೆಂದು ಸ್ಥಳೀಯರು ಭೀತಿಗೊಳಗಾಗಿದ್ದಾರೆ.