ಬಂಟ್ವಾಳ(ದಕ್ಷಿಣ ಕನ್ನಡ): ಸುಮಾರು 628 ಅಡಿಕೆ ಮರಗಳು ನೀಡಿದ ಫಲದಿಂದ ದೊರೆತ ಆರ್ಥಿಕ ಆದಾಯದಿಂದ ಸರ್ಕಾರಿ ಶಾಲೆಯೊಂದು ಬಸ್ ಖರೀದಿ ಮಾಡಿ ಗಮನ ಸೆಳೆದಿದೆ. ತನ್ನ ಕೈತೋಟದ ಮೂಲಕ ಈಗಾಗಲೇ ಪ್ರಸಿದ್ಧಿ ಪಡೆದಿರುವ ಬಂಟ್ವಾಳ ತಾಲೂಕಿನ ಗಡಿಗ್ರಾಮಗಳಲ್ಲೊಂದಾದ ಮಿತ್ತೂರಿನಲ್ಲಿರುವ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ಅದರಿಂದ ಲಭ್ಯವಾದ ಆದಾಯದಿಂದ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗಲು ಬಸ್ ಖರೀದಿಸಿದೆ.
ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೊಳಪಟ್ಟ ಈ ಶಾಲೆಗೆ ಖುದ್ದು ಆಗಮಿಸಿದ ಶಾಸಕ ಸಂಜೀವ ಮಠಂದೂರು ಬಸ್ಗೆ ಚಾಲನೆ ನೀಡಿ, ಶಾಲೆಗೆ ಮತ್ತಷ್ಟು ನೆರವುಗಳನ್ನು ಘೋಷಿಸಿದರು. ಇದೀಗ ಸೋಮವಾರ ಶಾಲೆ ಮಕ್ಕಳು ಬಸ್ಸು ಹತ್ತಿ ಶಾಲೆಗೆ ಆಗಮಿಸಿ ಸಂಭ್ರಮಪಟ್ಟರು.
ಶಾಲಾ ಆವರಣದಲ್ಲಿವೆ 628 ಅಡಿಕೆ ಗಿಡಗಳು.. ಶಾಲೆ ಸುಮಾರು 4.15 ಎಕರೆಯಷ್ಟು ಜಾಗವನ್ನು ಹೊಂದಿದ್ದು, ಅದರಲ್ಲಿ ಒಂದು ಎಕರೆಯಷ್ಟು ಪೂರ್ತಿ ಅಡಿಕೆ ತೋಟವನ್ನೇ ಹೊಂದಿದೆ. ಅಲ್ಲದೆ ಇತರೆಡೆಗಳಲ್ಲೂ ಅಡಿಕೆ ಗಿಡ ನೆಡಲಾಗಿದೆ. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಆದಂ ಮಿತ್ತೂರು ಅವರು ಇತರ ಎಸ್.ಡಿ.ಎಂ.ಸಿ. ಸದಸ್ಯರ ಜತೆಗೂಡಿ ಕೆಲ ವರ್ಷಗಳ ಹಿಂದೆ ಸ್ವತಃ ಧನಸಹಾಯ ಮಾಡುವ ಮೂಲಕ ಶಾಲಾಭಿವೃದ್ಧಿ ಜತೆಗೆ ಕೈತೋಟದ ಅಭಿವೃದ್ಧಿಗೆ ಕಾರ್ಯೋನ್ಮುಖರಾದರು. 2017ರಲ್ಲಿ ನೆಟ್ಟ 628 ಗಿಡಗಳು ಈಗ ಮರವಾಗಿವೆ. ಐದು ವರ್ಷಗಳ ಫಲವನ್ನು ಶಾಲಾ ಮಕ್ಕಳು ಪಡೆಯುತ್ತಿದ್ದಾರೆ ಎಂದು ಇಲ್ಲಿನ ಶಿಕ್ಷಕ ಸಂಜೀವ ಎನ್. ತಿಳಿಸಿದರು.
ಕಳೆದ ವರ್ಷ ಅಡಿಕೆ ತೋಟ ಫಸಲು ನೀಡಲಾರಂಭಿಸಿತು. ಶಾಲೆಯ ಮೇಲೆ ಪ್ರೀತಿಯಿಟ್ಟ ಊರಿನ ಜನರು ಈ ತೋಟವನ್ನು ನೋಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಬಸ್ ಖರೀದಿಗೆ ನಿಧಿ ಸಂಚಯವಾಯಿತು ಎಂದು ಶಾಲೆ ಮುಖ್ಯಶಿಕ್ಷಕಿ ಸರೋಜಾ ಎ. ತಿಳಿಸಿದರು.
26 ಸೀಟರ್ ಬಸ್: ಸುತ್ತಮುತ್ತಲಿನ ಸುಮಾರು 118 ಮಕ್ಕಳು ಇಲ್ಲಿಗೆ ಆಗಮಿಸುತ್ತಿದ್ದಾರೆ. ಇದುವರೆಗೆ ಆಟೋಗಳಲ್ಲಿ ಬರುತ್ತಿದ್ದರು. ಇನ್ನು, ಬಸ್ಸಿನಲ್ಲಿ ಎರಡು ಟ್ರಿಪ್ಗಳನ್ನು ಮಾಡುವ ಮೂಲಕ ಬರಲು ಸಾಧ್ಯ. ಮೂರು ವರ್ಷಗಳ ಹಿಂದೆ ಎಸ್.ಡಿ.ಎಂ.ಸಿ.ಯೇ ಆಟೋ ರಿಕ್ಷಾ ಬಾಡಿಗೆ ಗೊತ್ತು ಮಾಡಿ ಮಕ್ಕಳನ್ನು ಕರೆತರುವ ವ್ಯವಸ್ಥೆ ಮಾಡಿತ್ತು. ಇದೀಗ ಸೆಕೆಂಡ್ ಹ್ಯಾಂಡ್ ಬಸ್ ಖರೀದಿಯಾಗಿದೆ. ಇದರ ಖರ್ಚುವೆಚ್ಚವನ್ನು ಪೋಷಕರು ಸಮಾನವಾಗಿ ಭರಿಸಲಿದ್ದಾರೆ ಎಂದು ಅವರು ಹೇಳಿದರು.
112 ವರ್ಷಗಳ ಇತಿಹಾಸದ ಶಾಲೆ: 1910ನೇ ಇಸವಿಯಲ್ಲಿ ಆರಂಭಗೊಂಡ ಮಿತ್ತೂರು ಶಾಲೆಯಲ್ಲೀಗ 100ಕ್ಕೂ ಅಧಿಕ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಗ್ರಾಮ ಪಂಚಾಯಿತಿ ಸಹಿತ ಊರವರ ಕೊಡುಗೆ, ಆದಂ ಅವರ ಅಧ್ಯಕ್ಷತೆಯಲ್ಲಿ ಸಕ್ರಿಯವಾದ ಎಸ್.ಡಿ.ಎಂ.ಸಿ. ಹಾಗೂ ಸಮರ್ಥ ಶಿಕ್ಷಕರ ತಂಡದಿಂದ ಶಾಲೆ ಪ್ರಗತಿಯತ್ತ ಮುನ್ನಡೆಯುತ್ತಿದೆ. ಸ್ಮಾರ್ಟ್ ಶೌಚಾಲಯ ಸಹಿತ ಹಲವು ಅಭಿವೃದ್ಧಿ ಕಾರ್ಯಕ್ರಮಗಳು ಈಗಾಗಲೇ ನಡೆದಿವೆ.
ಇನ್ನಷ್ಟು ನೆರವು ನೀಡುವುದಾಗಿ ಈಗಾಗಲೇ ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ. ಕೈತೋಟದ ಮೂಲಕ ನಳನಳಿಸುತ್ತಿರುವ ಹಸಿರುಲೋಕ ಆರ್ಥಿಕವಾಗಿಯೂ ಶಕ್ತಿ ನೀಡಿದೆ. ತರಗತಿ ಕೊಠಡಿ, ವೇದಿಕೆ, ಸಭಾಂಗಣ, ಸ್ಮಾರ್ಟ್ ಕ್ಲಾಸ್ಗಳ ನಿರೀಕ್ಷೆಯಲ್ಲಿ ಶಾಲಾಭಿಮಾನಿಗಳು ಇದ್ದಾರೆ.
ಇದನ್ನೂ ಓದಿ: ಶಾಲೆ ಗೋಡೆಯಲ್ಲಿ ಅರಳಿದ ನಾಡ ಬಾವುಟ.. ಹೊಸ ರಂಗು ನೀಡಿದ ಗೆಳೆಯರ ಬಳಗ