ಮಂಗಳೂರು: ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಸಿಎಎ ಕಾಯ್ದೆ ಜಾರಿಗೊಳಿಸುವ ಬಗ್ಗೆ ಮರು ಚಿಂತನೆ ಮಾಡಬೇಕು. ಈ ಕಾಯ್ದೆಯನ್ನು ಹಿಂಪಡೆದು ದೇಶದ ಜನರಿಗೆ ಸಹಕಾರಿಯಾಗಿ ವರ್ತಿಸಬೇಕು ಎಂದು ಮುಸ್ಲಿಂ ಸೆಂಟ್ರಲ್ ಕಮಿಟಿಯ ಉಪಾಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಸಂವಿಧಾನದ ಆಶಯಗಳನ್ನ ಹತ್ತಿಕ್ಕುವಂತಹ ಕಾನೂನು ಬಂದಾಗ ಅದರ ವಿರುದ್ಧ ಜನರು ಸಿಡಿದೇಳುತ್ತಾರೆ. ಆದ್ದರಿಂದ ಕೇಂದ್ರ ಸರ್ಕಾರದ ಸಿಎಎ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ, ಹೋರಾಟಗಳು ನಡೆಯುತ್ತಿವೆ.
ಈ ನಿಟ್ಟಿನಲ್ಲಿ ಜನವರಿ 15ರಂದು ನಗರದ ಅಡ್ಯಾರ್ ಕಣ್ಣೂರಿನಲ್ಲಿ ಸಿಎಎ ಕಾಯ್ದೆ ವಿರೋಧಿಸಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಯಿತು. ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸದಲ್ಲಿಯೇ ಈ ಪ್ರತಿಭಟನೆ ಒಂದು ಚಾರಿತ್ರಿಕ ದಾಖಲೆ ಸೃಷ್ಟಿಸಿದೆ. ನಮ್ಮ ನಿರೀಕ್ಷೆಗಿಂತಲೂ ಅಧಿಕವಾಗಿ ಸುಮಾರು ಮೂರು ಲಕ್ಷ ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.