ಮಂಗಳೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರ, ಲಸಿಕೆಗೆ ಸಂಬಂಧಿಸಿದಂತೆ ಸ್ಪಷ್ಟವಾದ ನೀತಿಯನ್ನು ಜಾರಿಗೊಳಿಸದಿರುವುದು ಅತ್ಯಂತ ದುರಂತ ಹಾಗೂ ದುರದೃಷ್ಟಕರ. ಜನಪ್ರತಿನಿಧಿಗಳು ಲಸಿಕೆಯ ಬಗ್ಗೆ ವೈಜ್ಞಾನಿಕವಾಗಿ ಮಾತನಾಡುವುದನ್ನು ಬಿಟ್ಟು ರಾಜಕೀಯ ಮಾತನಾಡಲು ಹೋಗುತ್ತಿದ್ದಾರೆ ಎಂದು ಶಾಸಕ ಯು.ಟಿ. ಖಾದರ್ ಕಿಡಿಕಾರಿದ್ದಾರೆ.
ಬಿಜೆಪಿ ಲಸಿಕೆ ಮಾರಾಟ ಮಾಡುತ್ತಿದೆ ಎಂದು ಆರೋಪಿಸಿ, ಉಚಿತ ಲಸಿಕೆ ಎಂಬ ಜಾಹಿರಾತು ಫ್ಲೆಕ್ಸ್ ಮುಂಭಾಗ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು. ವಿಶ್ವದ ಎಲ್ಲಾ ದೇಶಗಳಲ್ಲಿ ಎರಡು ಹಂತದ ಲಸಿಕೆಯನ್ನು ನೀಡಿ, ಮೂರನೇ ಹಂತದ ಬೂಸ್ಟರ್ ಡೋಸ್ಅನ್ನು ನೀಡಲು ಟ್ರಯಲ್ ಹಂತ ಪ್ರಾರಂಭವಾಗಿದೆ. ಆದರೆ, ಭಾರತದಲ್ಲಿ ಲಸಿಕೆಯ ಬಗ್ಗೆ ಇರುವ ಗೊಂದಲವೇ ಇನ್ನೂ ನಿವಾರಣೆಯಾಗಿಲ್ಲ. ಇದಕ್ಕೆ ಕೇಂದ್ರ ಸರ್ಕಾರದ ವೈಫಲ್ಯವೇ ಕಾರಣ ಎಂದು ದೂರಿದರು.
ಕೊರೊನಾ ದೇಶಕ್ಕೆ ಕಾಲಿಟ್ಟು ಎರಡು ವರ್ಷಗಳಾದರೂ, ಯಾರಿಗೆ ಯಾವ ಹಂತದಲ್ಲಿ ಲಸಿಕೆ ನೀಡಬೇಕು ಎನ್ನುವ ಸ್ಪಷ್ಟನೆ ಕೇಂದ್ರ ಸರ್ಕಾರಕ್ಕಿಲ್ಲ. ಲಸಿಕೆಯ ಸಂಗ್ರಹ ಇದ್ದಾಗ ಎರಡನೇ ಡೋಸ್ 28 ದಿವಸಕ್ಕೆ, ಸಂಗ್ರಹ ಇಲ್ಲದಿದ್ದಾಗ 84 ದಿವಸಕ್ಕೆ ನೀಡುವುದು, ಲಸಿಕೆಯೇ ಇಲ್ಲದಿರುವಾಗ 100 ದಿವಸಕ್ಕೆ, ಲಸಿಕೆ ಬಂದಾಗ 10 ದಿವಸಕ್ಕೆ ನೀಡುವುದು ಜನರ ಆರೋಗ್ಯದ ವಿಚಾರದಲ್ಲಿ ಚೆಲ್ಲಾಟವಾಡುವಂತೆ ಕಾಣುತ್ತಿದೆ. ಒಂದು ಕಡೆಯಲ್ಲಿ ಉಚಿತ ಲಸಿಕೆ ಎಂದು ಹೇಳಲಾಗುತ್ತದೆ. ಇನ್ನೊಂದೆಡೆಯಲ್ಲಿ ಜನಸಾಮಾನ್ಯರು ಹಣ ಕೊಟ್ಟು ಲಸಿಕೆ ಪಡೆಯುವ ಸಂದರ್ಭ ಎದುರಾಗಿದೆ. ಸರ್ಕಾರದ ಈ ನೀತಿಯನ್ನು ಕಾಂಗ್ರೆಸ್ ಸಂಪೂರ್ಣವಾಗಿ ಖಂಡಿಸುತ್ತದೆ ಎಂದು ಖಾದರ್ ಹೇಳಿದರು.
ಇದನ್ನೂ ಓದಿ:ರಾಜ್ಯ, ಕೇಂದ್ರ ಸರ್ಕಾರದ ಸಾಧನೆ ಏನು ಎನ್ನುವ ಕಾಂಗ್ರೆಸ್ಗೆ ಮೂರೇ ತಿಂಗಳಲ್ಲಿ ಉತ್ತರ ನೀಡುವೆ: ಸಿಎಂ
ವಿಧಾನ ಪರಿಷತ್ನ ಮಾಜಿ ಸದಸ್ಯ ಐವನ್ ಡಿಸೋಜ ಮಾತನಾಡಿ, 35 ಸಾವಿರ ಕೋಟಿ ರೂ. ಉಚಿತ ಲಸಿಕೆ ನೀಡುವ ಉದ್ದೇಶದಿಂದ ಲಸಿಕೆ ತಯಾರಿಕೆಗೆ ಹಣ ಮೀಸಲಿಟ್ಟಿದ್ದರೂ ಶೇ. 90 ರಷ್ಟು ಜನರು ಹಣ ಕೊಟ್ಟು ಲಸಿಕೆ ಪಡೆಯುತ್ತಿದ್ದಾರೆ. ಇದು ಸರ್ಕಾರವು ಜನರನ್ನು ಹಿಂಸೆ ಮಾಡಲು ಹೊರಟಂತಿದೆ. ದ.ಕ.ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ 5.28 ಇದ್ದರೂ ಲಾಕ್ ಮಾಡಿ ಮನೆಯಲ್ಲಿರಲು ಹೇಳುತ್ತಿದ್ದಾರೆ. ಉಚಿತ ಲಸಿಕೆ ಎಂದು ಅಲ್ಲಲ್ಲಿ ಬ್ಯಾನರ್ ಹಾಕಿ ಪ್ರಚಾರ ಮಾಡಿ ಎಲ್ಲಾ ಕಡೆಗಳಲ್ಲಿ ಲಸಿಕೆಯನ್ನು ಮಾರಾಟ ಮಾಡಲಾಗುತ್ತಿದೆ. ಹಾಗಾದರೆ ಜನರಿಗೆ ಲಸಿಕೆಗಾಗಿ ಮೀಸಲಿಟ್ಟ ಹಣ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದ್ರು.