ಮಂಗಳೂರು: ಯಾರದ್ದೋ ಲಾಭಕ್ಕಾಗಿ ನಗರದ ಕೆಂಜಾರು ಬಳಿಯ ಕಪಿಲಾ ಗೋಶಾಲೆಯ ಧ್ವಂಸ ಮಾಡಲಾಗಿದೆ. ಇದರ ಪರಿಣಾಮವಾಗಿ 300 ಗೋವುಗಳು ಬೀದಿಪಾಲಾಗಿವೆ ಎಂದು ಕಪಿಲಾ ಗೋಶಾಲೆಯ ಮಾಲೀಕರಾದ ಪ್ರಕಾಶ್ ಶೆಟ್ಟಿ ಆರೋಪಿಸಿದ್ದಾರೆ.
ನಗರದ ಬಲ್ಮಠದಲ್ಲಿರುವ ಆರ್ಯ ಸಮಾಜದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಸರಕಾರವು ಸುಮೇಧಾ ಫೌಂಡೇಶನ್‌ನ ವತಿಯಿಂದ ನಡೆಸಲ್ಪಡುತ್ತಿರುವ ಪೇಜಾವರ ಗೋಸೇವಾ ಕೇಂದ್ರಕ್ಕೆ ತೋಕೂರು ಗ್ರಾಮದ 49 ಎಕರೆ ಜಾಗವನ್ನು ಮಂಜೂರು ಮಾಡಿದೆ. ಸುಮೇಧಾ ಫೌಂಡೇಶನ್‌ನ ಪ್ರಕಾಶ್ ರವರು ನಮ್ಮ ಹೆಸರು ದುರ್ಬಳಕೆ ಮಾಡಿ ಸರಕಾರದಿಂದ ಈ ಅನುದಾನವನ್ನು ಮಂಜೂರು ಮಾಡಿಕೊಂಡಿದ್ದಾರೆಂದು ಆರೋಪಿಸಿದ್ದಾರೆ.
10 ತಿಂಗಳ ಹಿಂದೆ ಸುಮೇಧಾ ಫೌಂಡೇಶನ್‌ನ ಪ್ರಕಾಶ್ ಅವರು ತನಗೆ ಫೋನ್ ಮಾಡಿ ನಮ್ಮ ಕಪಿಲಾ ಗೋಶಾಲೆಯಿಂದ ಗೋಮೂತ್ರ ಹಾಗೂ ಸೆಗಣಿ ಬೇಕೆಂದು ಕೇಳಿದ್ದರು. ಜೊತೆಗೆ ಸುಮೇಧಾ ಫೌಂಡೇಶನ್ ನಿಂದ ಕೆಲವರನ್ನು ಕಳುಹಿಸಿ ಕಪಿಲಾ ಗೋಶಾಲೆಯನ್ನು ತಾವೇ ನಡೆಸುತ್ತೇವೆ. ತಮಗೆ ತಿಂಗಳಿಗೆ 35 ಸಾವಿರ ರೂ. ನೀಡುತ್ತೇವೆ ಎಂದು ಹೇಳಿದ್ದರು. ಆ ಬಳಿಕ ಕೆಲವು ದಿನಗಳಲ್ಲಿ ಪ್ರಕಾಶ್ರವರು ನಮ್ಮ ಗೋಶಾಲೆಯ ಗೋವುಗಳ ಫೋಟೋಗಳನ್ನು ದುರ್ಬಳಕೆ ಮಾಡಿ ಪೇಜಾವರ ಗೋಸೇವಾ ಕೇಂದ್ರ ಸ್ಥಾಪಿಸುತ್ತೇವೆ ಎಂದು ಸರಕಾರದಿಂದ 49 ಎಕರೆ ಜಾಗವನ್ನು ಮಂಜೂರು ಮಾಡಿಕೊಂಡಿದ್ದಾರೆ. ಇಬ್ಬರ ಹೆಸರು ಒಂದೇ ಆಗಿರೋದನ್ನು ದುರ್ಬಳಕೆ ಮಾಡಿದ್ದಾರೆ ಎಂದು ಪ್ರಕಾಶ್ ಶೆಟ್ಟಿಯವರು ಆರೋಪಿಸಿದರು.
ಆದರೆ ಸರಕಾರ ಹಾಗೂ ಜಿಲ್ಲಾಡಳಿತ ಯಾರದ್ದೋ ಲಾಭಕ್ಕೋಸ್ಕರ ಕಪಿಲಾ ಗೋಶಾಲೆಯನ್ನು ಧ್ವಂಸಗೊಳಿಸಿದೆ. ಈ ಹಿನ್ನೆಲೆ ಎ.4ರಂದು ಬೆಳಗ್ಗೆ ಏಳು ಗಂಟೆಗೆ ಕಪಿಲಾ ಗೋಶಾಲೆಯಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯಕ್ಕೆ ಗೋಪ್ರೇಮಿಗಳಿಂದ ಪಾದಯಾತ್ರೆ ನಡೆಯಲಿದೆ ಎಂದು ಪ್ರಕಾಶ್ ಶೆಟ್ಟಿಯವರು ಹೇಳಿದರು.