ಮಂಗಳೂರು : ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ ಹಾಗೂ ಸುಗಂಧದ್ರವ್ಯವನ್ನು ಮಂಗಳೂರು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಈ ಸಂಬಂಧ ಓರ್ವನನ್ನು ಬಂಧಿಸಲಾಗಿದೆ.
ದುಬೈನಿಂದ ಬಂದಿರುವ ಭಟ್ಕಳ ಮೂಲದ ಈತನನ್ನು ಪರಿಶೀಲಿಸಿದಾಗ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ, ಸುಗಂಧ ದ್ರವ್ಯಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. ತಕ್ಷಣ ಕಸ್ಟಮ್ಸ್ ಅಧಿಕಾರಿಗಳು ಆರೋಪಿ ಸಹಿತ ಸೊತ್ತನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಯಿಂದ 24 ಕ್ಯಾರೆಟ್ ಪರಿಶುದ್ಧತೆಯ 201.200 ಗ್ರಾಂ ತೂಕದ 9,57,712 ರೂ. ಮೌಲ್ಯದ ಚಿನ್ನದ ಬಿಲ್ಲೆಗಳು, 24 ಗ್ರಾಂ ತೂಕದ 1,04,640 ರೂ. ಮೌಲ್ಯದ ಚಿನ್ನದ ನಾಣ್ಯಗಳು, 1,02,600 ರೂ. ಮೌಲ್ಯದ ಆ್ಯಪಲ್ ಐಫೋನ್, 1,69,500 ರೂ. ಮೌಲ್ಯದ ಸುಗಂಧ ದ್ರವ್ಯದ 12 ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.