ಮಂಗಳೂರು: ಗಾಂಜಾ ಸೇವನೆ ಮತ್ತು ಮಾರಾಟ ಪ್ರಕರಣದಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಇಬ್ಬರು ವೈದ್ಯರು, ಮಹಿಳಾ ವೈದ್ಯಕೀಯ ವಿದ್ಯಾರ್ಥಿಗಳು ಸೇರಿ 10 ಮಂದಿಯನ್ನು ಬಂಧಿಸಿದ್ದಾರೆ. ಮಂಗಳೂರಿನಲ್ಲಿ ವಾಸವಿದ್ದ ಸಾಗರೋತ್ತರ 38 ವರ್ಷದ ವಿದ್ಯಾರ್ಥಿ, ಮಂಗಳೂರು ಕೆಎಂಸಿ ಆಸ್ಪತ್ರೆಯಲ್ಲಿರುವ 32 ವರ್ಷದ ಕೇರಳದ ವೈದ್ಯಾಧಿಕಾರಿ, ಕೆಎಂಸಿ ಮಣಿಪಾಲದಲ್ಲಿ ಮೆಡಿಕಲ್ ಸರ್ಜನ್ ಆಗಿರುವ ತಮಿಳುನಾಡಿನ 28 ವರ್ಷದ ವೈದ್ಯ, ಕೆಎಂಸಿ ಮಂಗಳೂರಿನಲ್ಲಿ ಓದುತ್ತಿರುವ ಕೇರಳದ 24 ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿ, ಆಂದ್ರಪ್ರದೇಶದ ವಿದ್ಯಾರ್ಥಿನಿ, ಕೆಎಂಸಿ ಮಂಗಳೂರಿನ ನಾಲ್ಕನೇ ವರ್ಷದ ಬಿಡಿಎಸ್ ವಿದ್ಯಾರ್ಥಿನಿ, ಪಂಜಾಬ್ನ 22 ವಿದ್ಯಾರ್ಥಿನಿ, ಕೆಎಂಸಿ ಮಂಗಳೂರಿನ ಮೂರನೇ ವರ್ಷದ ದೆಹಲಿಯ ವಿದ್ಯಾರ್ಥಿ, ಕೆಎಂಸಿ ಮಂಗಳೂರಿನ ನಾಲ್ಕನೆ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿ, ಪುಣೆಯ 23 ವರ್ಷದ ವಿದ್ಯಾರ್ಥಿನಿ, ದೇರಳಕಟ್ಟೆ ಯೆನೆಪೊಯ ಆಸ್ಪತ್ರೆಯ ಮೂರನೇ ವರ್ಷದ ಎಂಡಿ ಪಿಸಿಯಾಟ್ರಿಕ್ ವಿದ್ಯಾರ್ಥಿನಿ, ಬಂಟ್ವಾಳ ತಾಲೂಕಿನ 34 ವರ್ಷದ ವಿದ್ಯಾರ್ಥಿ ಬಂಧಿತ ಆರೋಪಿಗಳು.
ಪ್ರಕರಣದ ಬಗ್ಗೆ ಮಾತನಾಡಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು, 'ಜ.7 ರಂದು ಬಿಡಿಎಸ್ ವಿದ್ಯಾರ್ಥಿ, ಯುಕೆಯ ವಿದ್ಯಾರ್ಥಿ ಇದ್ದ ಫ್ಲ್ಯಾಟ್ ಮೇಲೆ ದಾಳಿ ಮಾಡಿ ಆತನಿಂದ ಎರಡು ಕೆ.ಜಿ ಗಾಂಜಾ, ಆಟಿಕೆ ಪಿಸ್ತೂಲ್, ಎರಡು ಮೊಬೈಲ್ ಫೋನ್ ಮತ್ತು ಡಿಜಿಟಲ್ ತೂಕ ಮಾಪನ ವಶಪಡಿಸಿಕೊಳ್ಳಲಾಗಿತ್ತು. ಆತನನ್ನು ವಿಚಾರಣೆ ನಡೆಸಿದ ಸಂದರ್ಭದಲ್ಲಿ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳ ಗಾಂಜಾ ಸೇವನೆ ಮತ್ತು ಮಾರಾಟದ ಮಾಹಿತಿ ಸಿಕ್ಕಿದೆ. ದಾಳಿ ನಡೆಸಿ ಮತ್ತೆ 9 ಮಂದಿಯನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ದಾವಣಗೆರೆ ಗಾಂಜಾ ಪ್ರಕರಣ: 52 ಗಿಡಗಳೊಂದಿಗೆ ಆರೋಪಿ ವಶಕ್ಕೆ
ಇಬ್ಬರು ವೈದ್ಯರು, 7 ಮಂದಿ ವಿದ್ಯಾರ್ಥಿಗಳು.. ಬಂಧಿತ 9 ಮಂದಿಯಲ್ಲಿ ಇಬ್ಬರು ವೈದ್ಯರಾಗಿದ್ದು, ಏಳು ಮಂದಿ ವೈದ್ಯಕೀಯ ವಿದ್ಯಾರ್ಥಿಗಳಾಗಿದ್ದಾರೆ. ಇವರಲ್ಲಿ ನಾಲ್ಕು ಮಂದಿ ವಿದ್ಯಾರ್ಥಿನಿಯರಾಗಿದ್ದಾರೆ. ಇವರು ಪ್ರಮುಖ ಡ್ರಗ್ ಪೆಡ್ಲರ್ ನೀಲ್ ನಿಂದ ಗಾಂಜಾವನ್ನು ಪಡೆದು ಸೇವನೆ ಮತ್ತು ಮಾರಾಟ ಮಾಡುತ್ತಿದ್ದರು. ಇವರನ್ನು ಈಗಾಗಲೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಎರಡು ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದರು. ಆರೋಪಿಗಳು ಗಾಂಜಾ ಸೇವನೆ ಮಾಡಿದ್ದು, ಇವರಲ್ಲಿ ಯಾರು ಯಾರು ಪೆಡ್ಲರ್ ಆಗಿದ್ದವರು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಇವರು ಮಂಗಳೂರಿನ ವಿವಿಧ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದರು. ಅಪಾರ್ಟ್ಮೆಂಟ್ ಹಾಗೂ ಪಿಜಿಗಳನ್ನು ಬಾಡಿಗೆ ನೀಡುವ ಮಾಲೀಕರುಗಳು ತಾವು ಬಾಡಿಗೆಗೆ ನೀಡಿದ ಮನೆಯಲ್ಲಿ ನಡೆಯುವ ಚಟುವಟಿಕೆಗಳ ಬಗ್ಗೆ ಗಮನಿಸಬೇಕು ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ಹೇಳಿದರು.
ಜಮೀನಿನಲ್ಲಿ ಗಾಂಜಾ ಬೆಳೆದ ರೈತ: ಮತ್ತೊಂದೆಡೆ ಅಕ್ರಮವಾಗಿ ಗಾಂಜಾ ಬೆಳೆದ ರೈತನ ಜಮೀನಿನ ಮೇಲೆ ಪೊಲೀಸರು ದಾಳಿ ನಡೆಸಿದ್ದು, ರೈತ ಸೇರಿದಂತೆ ಆತನ ಹೊಲದಲ್ಲಿ ಬೆಳೆದಿದ್ದ 25 ಕೆ.ಜಿ ಗಾಂಜಾ ವಶಕ್ಕೆ ಪಡೆದ ಘಟನೆ ಇತ್ತೀಚೆಗೆ ಗೋಕಾಕ್ ತಾಲೂಕಿನ ಮಿಡಕನಹಟ್ಟಿ ಗ್ರಾಮದಲ್ಲಿ ಘಟನೆ ನಡೆದಿತ್ತು. ಮಿಡಕನಹಟ್ಟಿ ಗ್ರಾಮದ ಶಿವಲಿಂಗಪ್ಪ ಸವಸುದ್ದಿ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ. ಗೋಕಾಕ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಜಮೀನಿನಲ್ಲಿ ಗಾಂಜಾ ಬೆಳೆದ ರೈತ ಸೇರಿ 2.50 ಲಕ್ಷ ಮೌಲ್ಯದ ಮಾಲು ವಶಕ್ಕೆ