ಮಂಗಳೂರು: ಪಶ್ಚಿಮಘಟ್ಟ ಮತ್ತು ದಕ್ಷಿಣ ಕನ್ನಡದಲ್ಲಿ ಸುರಿಯುತ್ತಿರುವ ಮಳೆಗೆ ಉಕ್ಕಿ ಹರಿಯುತ್ತಿರುವ ಕುಮಾರಧಾರ ಮತ್ತು ನೇತ್ರಾವತಿ ನದಿಗಳು ಉಪ್ಪಿನಂಗಡಿಯಲ್ಲಿ ಸಂಗಮವಾಗಿವೆ. ಈ ಹಿನ್ನೆಲೆ, ಇಲ್ಲಿನ ಮಹತೋಭಾರ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಗಂಗಾ ಪೂಜೆ ನೆರವೇರಿತು.
ಎರಡು ನದಿಗಳು ಉಕ್ಕಿ ಹರಿದಾಗ ಉಪ್ಪಿನಂಗಡಿ ಕ್ಷೇತ್ರದ ಪ್ರಾಂಗಣಕ್ಕೆ ಎರಡು ನದಿಗಳ ನೀರು ಹರಿದು ಬರುತ್ತದೆ. ಅದು ಸೇರಿದಾಗ ಸಂಗಮ ಎಂದು ಭಕ್ತರು ಪೂಜಿಸುತ್ತಾರೆ. ಇಂದು ಸಂಜೆ 6.48ಕ್ಕೆ ಇವೆರಡೂ ನದಿಗಳು ಸಂಗಮಿಸಿದ್ದು, ಈ ವೇಳೆ ದೇವಾಲಯದ ವತಿಯಿಂದ ಗಂಗಾಪೂಜೆ ನಡೆಸಲಾಯಿತು.
ನೇತ್ರಾವತಿ ನದಿ ನೀರು ಬೆಳಗ್ಗೆಯೇ ಮಹಾಕಾಳಿ ದೇವಾಲಯದ ಎದುರು ಭಾಗದಿಂದ ಬಂದಿದ್ದು, ಕುಮಾರಧಾರ ನದಿ ನೀರು ಹಿಂಭಾಗದಿಂದ ಏರುತ್ತಿತ್ತು. ನದಿಗಳ ಸಂಗಮ ಸಂಭವಿಸಿದ ಕ್ಷಣದಲ್ಲಿ ಸಹಸ್ರಲಿಂಗೇಶ್ವರ ದೇವರಿಗೆ ಸಂಗಮ ಅಭಿಷೇಕ ಹಾಗೂ ಪೂಜೆ ನೆರವೇರಿಸಲಾಯಿತು. ಈ ಅಪರೂಪದ ಕ್ಷಣಕ್ಕಾಗಿ ಬೆಳಗ್ಗೆಯಿಂದಲೇ ಭಕ್ತರು ದೇವಾಲಯದಲ್ಲಿ ಕಾದು ಕುಳಿತಿದ್ದರು. ಇದೀಗ ಪವಿತ್ರವಾದ ಸಂಗಮವನ್ನು ಕಣ್ತುಂಬಿಕೊಂಡು ಭಕ್ತರು ಸಂಭ್ರಮಿಸಿದರು.