ಮಂಗಳೂರು: ಮುಂಬರುವ ಗ್ರಾಪಂ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬೂತ್ ಮಟ್ಟದಲ್ಲಿ ಸಶಕ್ತವಾಗಿ ಪಕ್ಷದ ಘಟಕ ಕೆಲಸ ಯಾವ ರೀತಿ ಮಾಡಬೇಕೆಂದು ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ರಾಜ್ಯದ ಸಂಘಟನಾ ಕಾರ್ಯದರ್ಶಿ ಅರುಣ್ ಜಿ.ಯವರು ಸಲಹೆ ನೀಡಿದ್ದಾರೆ ಎಂದು ಬಿಜೆಪಿ ರಾಜ್ಯ ವಕ್ತಾರ ಗಣೇಶ್ ಕಾರ್ಣಿಕ್ ಹೇಳಿದ್ದಾರೆ.
ನಗರದ ರಮಣ ಪೈ ಸಭಾಂಗಣದಲ್ಲಿ ಕೋರ್ ಕಮಿಟಿಯ ಸಭೆಯ ಬಳಿಕ ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು, ಪಂಚರತ್ನ ಎಂಬ ಕಲ್ಪನೆಯೊಂದಿಗೆ ಬೂತ್ ಮಟ್ಟದಲ್ಲಿ ಸಶಕ್ತವಾಗಿ ಪಕ್ಷದ ಘಟಕ ಕೆಲಸ ಮಾಡುವುದಕ್ಕಾಗಿ ಮತದಾರರ ಪಟ್ಟಿಯ ಒಂದು ಪುಟದಲ್ಲಿರುವ (ಪೇಜ್) ಪೇಜ್ಗೆ ಒಬ್ಬರಂತೆ ಪ್ರಮುಖರನ್ನು ಗುರುತಿಸಲ್ಪಡುವ ರೀತಿಯಲ್ಲಿ ಯಾವ ರೀತಿ ಪಕ್ಷವನ್ನು ಸಂಘಟನೆ ಮಾಡಬೇಕೆಂದು ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಅರುಣ್ ಜಿ.ಯವರು ಸಲಹೆ ನೀಡಿರುವುದಾಗಿ ಹೇಳಿದರು.
ರಾಜ್ಯ ಕಾರ್ಯಕಾರಿಣಿ ಸಭೆ ಎಂದರೆ ಸಂಘಟನಾತ್ಮಕ ಚಟುವಟಿಕೆಗಳಿಗೆ ಒತ್ತುಕೊಡುವುದು. ಈ ಮೂಲಕ ಪಕ್ಷದ ಕಾರ್ಯಕರ್ತರು ಕಾರ್ಯಕಾರಿಣಿ ಸಭೆಯ ಬಳಿಕ ಯಾವ ರೀತಿ ಕಾರ್ಯನಿರ್ವಹಿಸಬೇಕು ಎಂಬುದರ ಬಗ್ಗೆ ಸಲಹೆ ನೀಡಿದ್ದಾರೆ ಎಂದು ಹೇಳಿದರು.
ಈ ಕಾರ್ಯಕಾರಿಣಿ ಸಭೆಯಲ್ಲಿ ಮೂರು ಪ್ರಮುಖವಾದ ನಿರ್ಣಯಗಳನ್ನು ಅಂಗೀಕರಿಸಲಾಯಿತು. ಒಂದು ದೇಶದಲ್ಲಿ ಪ್ರಮುಖ ಬದಲಾವಣೆ ಕಾಣಬೇಕಾದಲ್ಲಿ ಮೊದಲಿಗೆ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆಯಾಗಬೇಕು. ಅದಕ್ಕಾಗಿ ಮಗುವಿನ ಮೂರನೇ ವಯಸ್ಸಿನಿಂದ ಉನ್ನತ ಶಿಕ್ಷಣದವರೆಗೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಂಗೀಕರಿಸಲಾಗಿದೆ. ಈ ಮೂಲಕ ಯಾವ ರೀತಿ ಬದಲಾವಣೆ ತರಲು ಸಾಧ್ಯ ಎಂದು ಚರ್ಚೆ ನಡೆಸಲಾಯಿತು.
ಎರಡನೆಯದಾಗಿ ಹಿಂದಿನ ಕಾನೂನುಗಳನ್ನು ಕೈಬಿಡದೆ ರೈತ ಬೆಳೆದ ಬೆಳೆಗಳಿಗೆ ಒಳ್ಳೆಯ ಬೆಲೆ ಹಾಗೂ ಒಳ್ಳೆಯ ಮಾರುಕಟ್ಟೆ ಒದಗಿಸುವ ಸಲುವಾಗಿ ಹಾಗೂ ರೈತರ ಆದಾಯ ದ್ವಿಗುಣಗೊಳಿಸುವ ಪ್ರಯತ್ನವಾಗಿ ಕೇಂದ್ರ ಮೂರು ವಿಧೇಯಕಗಳನ್ನು ಜಾರಿಗೊಳಿಸಿದೆ. ಅದರ ಮೂಲಕ ರೈತರ ಬದುಕನ್ನು ಹಸನುಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಈ ಮೂಲಕ ಕ್ರಾಂತಿಕಾರಿ ಬದಲಾವಣೆ ಮಾಡಲು ಪ್ರಯತ್ನ ಮಾಡಲಾಗುತ್ತಿದೆ. ಇದನ್ನು ಕೂಡಾ ಕಾರ್ಯಕಾರಿಣಿ ಸ್ವಾಗತ ಮಾಡುತ್ತಿದೆ ಎಂದರು.
ಮೂರನೆಯದಾಗಿ ನೆರೆ ಹಾಗೂ ಕೋವಿಡ್ ಸಂದರ್ಭದಲ್ಲಿ ರಾಜ್ಯ ಸರ್ಕಾರ ಜನರ ನೆರವಿಗೆ ಧಾವಿಸಿರುವುದನ್ನು ಕಾರ್ಯಕಾರಿಣಿ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಎಂದು ಗಣೇಶ್ ಕಾರ್ಣಿಕ್ ಹೇಳಿದರು.