ಮಂಗಳೂರು: ಬಿಟ್ ಕಾಯಿನ್ ಪ್ರಕರಣ (Bitcoin case)ದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ (Basavaraja Bommai) ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸುತ್ತಿದ್ದ ಸಿದ್ದರಾಮಯ್ಯನವರೇ ಈಗ ರಾಜೀನಾಮೆ ನೀಡಬೇಕಿದೆ. ಅವರ ಪಕ್ಷದ ಪ್ರಭಾವಿಗಳ ಮಕ್ಕಳ ಹೆಸರೇ ಕೇಳಿ ಬರುತ್ತಿದ್ದು, ಇದೀಗ ಸಿದ್ದರಾಮಯ್ಯ ತಮ್ಮ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆಯೇ?. ಹಾಗೆಯೇ ಕೆಪಿಸಿಸಿ ಅಧ್ಯಕ್ಷರಿಗೆ ರಾಜಿನಾಮೆ ನೀಡಲು ತಿಳಿಸುತ್ತಾರೆಯೇ? ಎಂದು ರಾಜ್ಯ ಬಿಜೆಪಿ ವಕ್ತಾರ ಗಣೇಶ್ ಕಾರ್ಣಿಕ್ (State BJP spokesperson Ganesh Karnik) ಪ್ರಶ್ನಿಸಿದ್ದಾರೆ.
ನಗರದ ಕೊಡಿಯಾಲಬೈಲ್ ಅಟಲ್ ಕೇಂದ್ರದಲ್ಲಿ ಮಾತನಾಡಿರುವ ಅವರು, ಈ ಪ್ರಕರಣದ ಬಗ್ಗೆ ಮಾಜಿ ಸಿಎಂ ಆಗಿದ್ದುಕೊಂಡು ಸಿದ್ದರಾಮಯ್ಯನವರಿಗೆ ಇದರ ಬಗ್ಗೆ ಎಲ್ಲಾ ಮಾಹಿತಿಯಿತ್ತು. ಅವರ ಪಕ್ಷದವರೇ ಇದ್ದಾರೆ ಎನ್ನುವ ಕಾರಣಕ್ಕೆ ಮುಚ್ಚಿಹಾಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಬಿಟ್ ಕಾಯಿನ್ ಪ್ರಕರಣ ಸಿದ್ದರಾಮಯ್ಯನವರು ಸಿಎಂ ಆಗಿದ್ದ ಅವಧಿಯಲ್ಲಿ ನಡೆದಿರುವ ಘಟನೆ. ಇದೀಗ ಅವರು ತಮ್ಮಲ್ಲಿ ಹಗರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಇದೆ ಎಂದರಾದರೂ ಯಾಕೆ ಅದನ್ನು ಬಿಚ್ಚಿಡುತ್ತಿಲ್ಲ. ಹಗರಣದ ಪ್ರಮುಖ ಆರೋಪಿ ಶ್ರೀಕಿ ಬಂಧನದ ಬಳಿಕ ಆತ ಮೊಹಮ್ಮದ್ ನಲಪಾಡ್ (Mohammed Nalapad), ದರ್ಶನ್ ಲಮಾಣಿ ಹೆಸರು ಹೇಳಿದ್ದಾನೆ. ಡ್ರಗ್ಸ್ ಹಾಗೂ ಬಿಟ್ ಕಾಯಿನ್ ಡೀಲಿಂಗ್ಸ್ ಬಗ್ಗೆ ಉಲ್ಲೇಖಿಸಿದ್ದಾನೆ. ಆದರೆ, ಸಿದ್ದರಾಮಯ್ಯನವರು ಸಮಾಜದ ದಾರಿ ತಪ್ಪಿಸುವ ಕಾರ್ಯ ಮಾಡಿತ್ತಿದ್ದಾರೆ. ಅವರು ನಿರಂತರವಾಗಿ ಪ್ರಚಾರದಲ್ಲಿ ಇರಬೇಕೆಂಬ ಹಪಹಪಿಕೆಯಿಂದ ಬಿಜೆಪಿ ಮೇಲೆ ಗೂಬೆ ಕೂರಿದುವ ಕೆಲಸ ಮಾಡುತ್ತಿದ್ದಾರೆ. ಇದು ಮಾಜಿ ಸಿಎಂ ಓರ್ವರಿಗೆ ಶೋಭೆ ತರುವ ಕೆಲಸವಲ್ಲ ಎಂದು ಕಿಡಿಕಾರಿದ್ದಾರೆ.
ಬಿಜೆಪಿ ಪಕ್ಷ ಈ ಹಗರಣದ ಬಗ್ಗೆ ತನಿಖೆ ನಡೆಸಲು ಪ್ರಾಮಾಣಿಕ ಪ್ರಯತ್ನಕ್ಕೆ ಸಿದ್ಧವಾಗಿದೆ. ಇದನ್ನು ಸಿಎಂ ಹಾಗೂ ಗೃಹಮಂತ್ರಿಯವರು ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ, ಸಿದ್ದರಾಮಯ್ಯನವರು ತನಗೆ ಅಧಿಕಾರ ಕೊಡಿ ಆ ಬಳಿಕ ತಪ್ಪಿತಸ್ಥರನ್ನು ಪತ್ತೆ ಹಚ್ಚುವೆ ಎಂದು ಹೇಳುತ್ತಾರೆ. ಆದ್ದರಿಂದ ಸಂಶಯದ ಸುಳಿ ಸಿದ್ದರಾಮಯ್ಯ ಹಾಗೂ ಅವರ ಚೇಲಾಗಳ ಸುತ್ತ ಸುತ್ತುತ್ತಿದೆ ಎಂದು ಆರೋಪಿಸಿದ್ದಾರೆ.