ಮಂಗಳೂರು: ಫೇಸ್ಬುಕ್ನಲ್ಲಿ ಯುವಕರನ್ನು ಪರಿಚಯ ಮಾಡಿಕೊಂಡು ಹನಿಟ್ರ್ಯಾಪ್ ಮಾಡಿ ದರೋಡೆ ಮಾಡುತ್ತಿದ್ದ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುರತ್ಕಲ್ನ ರೇಷ್ಮಾ ಯಾನೆ ನೀಮಾ, ಜೀನತ್ ಯಾನೆ ಜೀನತ್ ಮುಬೀನ್, ಆಕೆಯ ಪತಿ ಇಕ್ಬಾಲ್ ಮಹಮ್ಮದ್ ಯಾನೆ ಇಕ್ಬಾಲ್ ಮತ್ತು ನಾಸಿಫ್ ಯಾನೆ ಅಬ್ದುಲ್ ಖಾದರ್ ನಾಜೀಪ್ ಬಂಧಿತರು. ರೇಶ್ಮಾ ಮತ್ತು ಜೀನತ್ ಎಂಬಿಬ್ಬರು ಫೇಸ್‌ಬುಕ್ ಮೂಲಕ ಯುವಕರನ್ನು ಪರಿಚಯ ಮಾಡಿಕೊಂಡು ಮನೆಗೆ ಕರೆಸಿ ಅವರನ್ನು ವಿವಸ್ತ್ರಗೊಳಿಸಿ ದರೋಡೆ ಮಾಡುತ್ತಿದ್ದರು ಎಂದು ತಿಳಿಸಿದರು.
ಕೇರಳದ ಕುಂಬಳೆಯ ಯುವಕನೊಬ್ಬನನ್ನು ಫೇಸ್ಬುಕ್ನಲ್ಲಿ ಪರಿಚಯ ಮಾಡಿಕೊಂಡ ಜೀನತ್, ಆತನನ್ನು ಮಂಗಳೂರಿಗೆ ಬರುವಂತೆ ಆಹ್ವಾನಿಸಿದ್ದಾರೆ. ಆಕೆಯನ್ನು ನಂಬಿದ ಸಂತ್ರಸ್ತ ಯುವಕ ಸುರತ್ಕಲ್ಗೆ ಬಂದಾಗ ಆತನನ್ನು ಕಾರಿನಲ್ಲಿ ಮನೆಗೆ ಕರೆದುಕೊಂಡು ಬಂದು ದೊಣ್ಣೆಯಿಂದ ಹೊಡೆದು ಹಲ್ಲೆ ಮಾಡಿದ್ದಾರೆ. ಬಳಿಕ ಆತನನ್ನು ವಿವಸ್ತ್ರ ಮಾಡಿ ವಿಡಿಯೋ ದೃಶ್ಯ ಸೆರೆ ಹಿಡಿದು 5 ಲಕ್ಷ ರೂ ನೀಡುವಂತೆ ಬೇಡಿಕೆ ಇಟ್ಟಿದ್ದರು. ಸಂತ್ರಸ್ತ ಯುವಕ ಮೊದಲಿಗೆ 30 ಸಾವಿರ ಹಣ ಕೊಟ್ಟು ಹಂತ ಹಂತವಾಗಿ ಹಣ ನೀಡುವುದಾಗಿ ಹೇಳಿದ್ದಾನೆ. ಬಳಿಕ ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇದೀಗ ನಾಲ್ವರನ್ನು ಬಂಧಿಸಿದ್ದಾರೆ.
ಬಂಧನದ ಬಳಿಕ 6 ಪ್ರಕರಣ ಬೆಳಕಿಗೆ:
ಈ ನಾಲ್ವರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸುವ ವೇಳೆ ಈ ತಂಡ ಇನ್ನೂ ಆರು ಮಂದಿಯನ್ನು ಹನಿಟ್ರ್ಯಾಪ್ ಮೂಲಕ ದರೋಡೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಆರು ಮಂದಿ ಹನಿಟ್ರ್ಯಾಪ್ಗೆ ಒಳಗಾದವರಲ್ಲಿ ಹೆಚ್ಚಿನವರು ಕೇರಳದವರೆಂದು ಅಂದಾಜಿಸಲಾಗಿದೆ. ಸ್ಥಳೀಯ ಬ್ಯಾರಿ ಭಾಷೆಯ ಮೂಲಕ ಕೇರಳದ ಮಲಯಾಳಂ ಮಾತಾಡುವ ಯುವಕರನ್ನು ಪರಿಚಯ ಮಾಡಿಕೊಂಡು ಇವರು ಹನಿಟ್ರ್ಯಾಪ್ ಮಾಡುತ್ತಿದ್ದರು ಎಂದು ಕಮೀಷನರ್ ತಿಳಿಸಿದ್ದಾರೆ.
ಇದನ್ನೂ ಓದಿ: ಪುತ್ತೂರು: ಗಾಂಜಾ ಸಾಗಿಸುತ್ತಿದ್ದ ಯುವಕನ ಬಂಧನ
ಈ ಎಲ್ಲ ಆರೋಪಿಗಳು ಬಂದ ಹಣದಿಂದ ಐಷಾರಾಮಿ ಜೀವನ ನಡೆಸುತ್ತಿದ್ದು, XUV 500 ಕಾರನ್ನು ಬಳಸುತ್ತಿದ್ದರು. ಹನಿಟ್ರ್ಯಾಪ್ ಕಾರ್ಯ ಇಲ್ಲದ ಸಮಯದಲ್ಲಿ XUV ಕಾರನ್ನು ರಾಜ್ಯದ ವಿವಿಧೆಡೆ ಗೋವುಗಳನ್ನು ಸಾಗಾಟ ಮಾಡಲು ಬಳಸುತ್ತಿದ್ದರು. ಇವರ ಐಷಾರಾಮಿ ಬದುಕಿಗೆ ಝೀನತ್ ಬಳಿ ನಾಲ್ಕು ಕ್ರೆಡಿಟ್ ಕಾರ್ಡ್ಗಳು ಸಾಕ್ಷಿಯಾಗಿ ದೊರೆತಿದೆ ಎಂದು ಪೊಲೀಸರು ತಿಳಿಸಿದ್ದಾರೆ.