ಮಂಗಳೂರು: ಕೇರಳದಿಂದ ಕರ್ನಾಟಕ ಪ್ರವೇಶಿಸಲು ಆರ್ಟಿಸಿಆರ್ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿರುವ ನಡುವೆ ನಕಲಿ ಕೊವಿಡ್ ವರದಿ ಬಳಸಿ ಜಿಲ್ಲೆಗೆ ಪ್ರವೇಶಿಸಿದ ಆರು ಮಂದಿ ಮತ್ತು ನಕಲಿ ಸರ್ಟಿಫಿಕೇಟ್ ಸೃಷ್ಟಿಸಿದ ಓರ್ವನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಕೇರಳ ಮೂಲಕ ಅಬ್ದುಲ್ ತಮೀಮ್ (19), ಹಾದಿಲ್ (25), ಇಸ್ಮಾಯಿಲ್(48), ಹಸೀನ್ (31) , ಮೊಹಮ್ಮದ್ ಶರೀಫ್ (34), ಅಬೂಬಕ್ಕರ್ (28) ಮತ್ತು ಕಬೀರ್ ಎ ಎಂ (24) ಬಂಧಿತ ಆರೋಪಿಗಳು.
ಪ್ರಕರಣದ ಕುರಿತು ಮಾತನಾಡಿದ ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ಅವರು, ಕೇರಳದಿಂದ ಮಂಗಳೂರಿಗೆ ಬರುವವರನ್ನು ನಗರದ 9 ಕಡೆ ಚೆಕ್ ಪೋಸ್ಟ್ನಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಇತ್ತೀಚೆಗೆ ಕೋವಿಡ್ ರಿಪೋರ್ಟ್ ಪೋರ್ಜರಿ ಪ್ರಕರಣಗಳು ಹೆಚ್ಚಾಗಿವೆ. ಇದರಿಂದ ಆರ್ಟಿಪಿಸಿಆರ್ ನೆಗೆಟಿವ್ ವರದಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ. ನಿನ್ನೆ ಮತ್ತು ಇವತ್ತು ನಾಲ್ಕು ಪ್ರಕರಣಗಳು ಪತ್ತೆಯಾಗಿವೆ. ನಿನ್ನೆ ನಾಲ್ಕು ಮಂದಿಯನ್ನು, ಇಂದು ಇಬ್ಬರನ್ನು ಮತ್ತು ಪೋರ್ಜರಿ ಮಾಡಿ ಕೊಡುತ್ತಿದ್ದ ಓರ್ವನನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ಏಳು ಮಂದಿ ಬಂಧಿತರಲ್ಲಿ ಇಬ್ಬರು ವಿದ್ಯಾರ್ಥಿಗಳು ಇದ್ದಾರೆ. ಬಂಧಿತರಲ್ಲಿ ಕೇರಳದ ಆರು ಮತ್ತು ಮಂಗಳೂರಿನ ಓರ್ವ ಸೇರಿದ್ದಾನೆ. ಇನ್ನೂ ಮೂರು ಮಂದಿ ಮಹಿಳೆಯರು ನಕಲಿ ಪ್ರಮಾಣಪತ್ರದೊಂದಿಗೆ ಬಂದಿದ್ದು ಇವರು ತಮ್ಮ ಜೊತೆಗಿದ್ದವರು ಅಸಲಿ ಸರ್ಟಿಫಿಕೇಟ್ ಎಂದು ಕರೆದುಕೊಂಡು ಬಂದಿದ್ದಾಗಿ ತಿಳಿಸಿದ್ದಾರೆ. ಅದಕ್ಕಾಗಿ, ಅವರನ್ನು ಬಂಧಿಸಲಾಗಿಲ್ಲ. ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಲಾಗಿದೆ. ಇನ್ನೂ ಸರ್ಟಿಫಿಕೇಟ್ ನಕಲಿ ಸೃಷ್ಟಿಸಿದ ಕಬೀರ್ ಎಂಬಾತನನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.