ಮಂಗಳೂರು:ಕೃಷ್ಣ ಮೃಗದ ಕೊಂಬು ಹಾಗೂ ಚರ್ಮದ ಮಾರಾಟಕ್ಕೆ ಯತ್ನಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಮಂಗಳೂರು ವಿಶೇಷ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸರು ಬಿಜೈ ಕೆಎಸ್‌ಆರ್‌ಟಿಸಿ ನಿಲ್ದಾಣದ ಬಳಿ ಬಂಧಿಸಿದ್ದಾರೆ.
ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ದಾಟ್ನಾಳ್ ಗ್ರಾಮದ ಅಂಬೇಡ್ಕರ್ ನಗರದ ರವಿ ಹನುಮಂತಪ್ಪ(32), ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ದಾಟ್ನಾಳ್ ಗ್ರಾಮದ ನವನಗರ ನಿವಾಸಿ ಮಲ್ಲಪ್ಪ(32), ಗದಗ ಜಿಲ್ಲೆ ರೋಣಾ ತಾಲೂಕಿನ ಹೊಳೆ ಆಲೂರು ಗ್ರಾಮದ ಸೇವಾಲಾಲ್ ನಗರ ನಿವಾಸಿ ಟಿಪ್ಪು ಸುಲ್ತಾನ್ ಅಲಿಯಾಸ್ ಮುನ್ನ (33) ಮತ್ತು ಪರಶುರಾಮ ಲಮಾಣಿ(32) ಬಂಧಿತ ಆರೋಪಿಗಳು. ಆರೋಪಿಗಳು ನಗರದ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಕೃಷ್ಣ ಮೃಗದ ಚರ್ಮ ಹಾಗೂ ಕೊಂಬನ್ನು ಮಾರಾಟ ಮಾಡುವ ಉದ್ದೇಶದಿಂದ ತರುತ್ತಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಮಂಗಳೂರು ವಿಶೇಷ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸರು ದಾಳಿ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಸಂದರ್ಭ ಆರೋಪಿಗಳ ವಶದಲ್ಲಿದ್ದ ಎರಡು ಕೃಷ್ಣಮೃಗಗಳ ಚರ್ಮ ಹಾಗೂ ಒಂದು ಜೊತೆ ಕೊಂಬು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ವನ್ಯಜೀವಿ ಕೃಷ್ಣ ಮೃಗಗಳನ್ನು ಅಕ್ರಮವಾಗಿ ಬೇಟೆಯಾಡಿ ಅವುಗಳ ಚರ್ಮ ಹಾಗೂ ಕೊಂಬನ್ನು ಮಾರಾಟ ಮಾಡಲು ಪ್ರಯತ್ನಿಸಿರುವುದರಿಂದ ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಮುಂದಿನ ಕ್ರಮಕೈಗೊಳ್ಳಲು ಆರೋಪಿಗಳನ್ನು ಸೊತ್ತು ಸಹಿತ ಮಂಗಳೂರು ವಲಯ ಅರಣ್ಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.