ಮಂಗಳೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರ ಆಡಳಿತದ ಅನುಭವದ ಕೊರತೆಯಿಂದ ನರಳಾಡುತ್ತಿದೆ ಎಂದು ಮಾಜಿ ಶಾಸಕ ಜೆ.ಆರ್.ಲೋಬೊ ಆಕ್ರೋಶ ಹೊರಹಾಕಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್ನಲ್ಲಿ ಮಾತನಾಡಿದ ಅವರು, ಕಳೆದ ಅವಧಿಯ ಕೊರೊನಾ ಬಂದಾಗಲೇ 2ನೇ ಅಲೆಯ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದರು. ಆದರೆ, ಲಸಿಕೆ ಉತ್ಪಾದನೆ ಬಗ್ಗೆ ಸರ್ಕಾರ ಯಾವುದೇ ರೀತಿಯ ಚಿಂತನೆ ನಡೆಸಿಲ್ಲ. ಯಾರೋ ಖಾಸಗಿಯವರು ನಮ್ಮಲ್ಲಿಗೆ ಬಂದು ಲಸಿಕೆಯನ್ನು ತಯಾರಿಸುವ ಇಂಗಿತ ವ್ಯಕ್ತಪಡಿಸಿದಾಗ ಅವರಿಗೆ ಸಂಪೂರ್ಣ ಸಹಕಾರ ನೀಡುವ ಜವಾಬ್ದಾರಿ ಸರ್ಕಾರದ್ದಾಗಿತ್ತು. ಆದರೆ, ಇದನ್ನು ಸರ್ಕಾರ ಮಾಡಲೇ ಇಲ್ಲ ಎಂದರು.
ಇಂದು ಸಮರೋಪಾದಿಯಲ್ಲಿ ಸೋಂಕಿನ ವಿರುದ್ಧ ಹೋರಾಡುವ ಕಾಲ. ಈ ಹಿನ್ನೆಲೆ ಲಸಿಕೆಯನ್ನು ಬೇರೆಡೆಯಿಂದ ಆಮದು ಮಾಡಿಯೋ ಅಥವಾ ನಮ್ಮಲ್ಲಿಯೇ ಉತ್ಪಾದನೆ ಮಾಡಿಯೋ ಎಲ್ಲರಿಗೂ ಕೊಡುವಂತಹ ಕಾರ್ಯ ಆಗಬೇಕಿತ್ತು. ಅಲ್ಲದೆ ಲಸಿಕೆಯು ಸರ್ಕಾರಿ ಆಸ್ಪತ್ರೆಗಳಲ್ಲೋ, ಖಾಸಗಿ ಆಸ್ಪತ್ರೆಗಳಲ್ಲೋ ಎಲ್ಲರಿಗೂ ಮುಕ್ತವಾಗಿ ಲಭ್ಯವಾಗುವಂತೆ ಮಾಡಬೇಕಿತ್ತು. ಇದಕ್ಕಾಗಿ ಸರ್ಕಾರ ತನ್ನಲ್ಲಿರುವ ಹಣಕಾಸನ್ನು ಲಸಿಕೆಗೆ ವಿನಿಯೋಗಿಸಬೇಕಿತ್ತು. ಆದರೆ, ಇದನ್ನು ಸರ್ಕಾರ ಮಾಡಲೇ ಇಲ್ಲ. ಜೊತೆಗೆ ಸೋಂಕನ್ನು ತಡೆಗಟ್ಟಲು ಬೇಕಾದ ಯೋಜನೆಯೂ ಅದರ ಬಳಿಯಿಲ್ಲ ಎಂದರು.
ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ಹಿಂದೆ ಜನಾರ್ದನ ಪೂಜಾರಿ, ವೀರಪ್ಪ ಮೊಯಿಲಿ, ಆಸ್ಕರ್ ಫೆರ್ನಾಂಡೀಸ್ ಅವರು ಸಂಸದರು, ರಾಜ್ಯಸಭಾ ಸದಸ್ಯರಾಗಿದ್ದಾಗ ರಾಜ್ಯಕ್ಕೆ ಏನಾದರೂ ತೊಂದರೆಯಾಗಿದ್ದಾಗ ದೂರವಾಣಿ ಮೂಲಕ ಕೇಂದ್ರದ ಪಿಎಂ ಕಚೇರಿ, ಆರೋಗ್ಯ ಸಚಿವಾಲಯಕ್ಕೆ ಶಕ್ತಿ ಸಾಮರ್ಥ್ಯವಿತ್ತು. ಇಂದು ಬಿಜೆಪಿ ಪಕ್ಷದಲ್ಲಿ ಈ ರೀತಿಯಲ್ಲಿ ಆಡಳಿತ ನಡೆಸುವ ಕೊರತೆ ಇದೆ.
ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆಕ್ಸಿಜನ್ ಕೊಡಬೇಕೆಂದು ಹೇಳುವಾಗ ಕೇಂದ್ರ ಸರ್ಕಾರ ಬಗ್ಗೆ ಸುಪ್ರೀಂಕೋರ್ಟ್ ಮೇಲೇರುತ್ತದೆ. ಈ ಬಗ್ಗೆ ಮಾತನಾಡಲು ರಾಜ್ಯದಲ್ಲಿ ಓರ್ವ ಮಂತ್ರಿ, ಓರ್ವ ಸಂಸದರೂ ಇಲ್ಲವೇ ಎಂದು ಪ್ರಶ್ನಿಸಿದರು.