ಮಂಗಳೂರು : ಲಾಕ್ಡೌನ್ ಸಂದರ್ಭದಲ್ಲಿ ಮೂಡಬಿದ್ರೆ ಆಸ್ಪತ್ರೆಯಲ್ಲಿ ದುಡಿಯುತ್ತಿರುವ ಕೊರೊನಾ ವಾರಿಯರ್ಸ್ಗಳಿಗೆ ಸಂಚರಿಸಲು ತನ್ನ ಬಳಿಯಿದ್ದ ಎರಡು ಕಾರುಗಳನ್ನು ನೀಡುವ ಮೂಲಕ ಮಾಜಿ ಸಚಿವ ಅಭಯಚಂದ್ರ ಜೈನ್ ಮಾದರಿಯಾಗಿದ್ದಾರೆ.
![ಮಾಜಿ ಸಚಿವರ ಕಾರು](https://etvbharatimages.akamaized.net/etvbharat/prod-images/kn-mng-02-abhayachandra-jain-photo-7202146_21072020163043_2107f_1595329243_320.jpg)
ಮಾರ್ಚ್ ತಿಂಗಳಲ್ಲಿ ಲಾಕ್ಡೌನ್ ಸಂದರ್ಭದಲ್ಲಿ ಮತ್ತು ಇತ್ತೀಚೆಗೆ 15 ದಿನಗಳಿಂದ ಅವರು ತಮ್ಮ ಕಾರುಗಳನ್ನು ಕೊರೊನಾ ವಾರಿಯರ್ಸ್‌ಗಳ ಸೇವೆಗೆ ನೀಡಿದ್ದಾರೆ. ಮೂಡಬಿದ್ರೆ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನರ್ಸ್ಗಳು, ಸಿಬ್ಬಂದಿ, ಲ್ಯಾಬ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರು ಮೂಡಬಿದ್ರೆಯ ವಿವಿಧ ಭಾಗಗಳಿಂದ ಬರುವವರು, ಮೊದಲ ಲಾಕ್ಡೌನ್ ಸಂದರ್ಭದಲ್ಲಿ ಬಸ್ಗಳ ವ್ಯವಸ್ಥೆ ಇಲ್ಲದೆ ಅವರಿಗೆ ಕರ್ತವ್ಯ ನಿರ್ವಹಿಸಲು ಆಸ್ಪತ್ರೆಗೆ ಬರಲು ಕಷ್ಟವಾಗುತ್ತಿರುವುದನ್ನು ತಿಳಿದುಕೊಂಡ ಮಾಜಿ ಸಚಿವ ಅಭಯಚಂದ್ರ ಜೈನ್ ತಮ್ಮ ಎರಡು ಕಾರುಗಳನ್ನು ಕೊರೊನಾ ವಾರಿಯರ್ಸ್ ಸೇವೆಗೆ ನೀಡಿದ್ದಾರೆ.
![ಮಾಜಿ ಸಚಿವ ಅಭಯಚಂದ್ರ ಜೈನ್](https://etvbharatimages.akamaized.net/etvbharat/prod-images/kn-mng-02-abhayachandra-jain-photo-7202146_21072020163043_2107f_1595329243_993.jpg)
ಮೊದಲ ಲಾಕ್ಡೌನ್ ಸಂದರ್ಭದಲ್ಲಿ ಎರಡು ತಿಂಗಳು ಕಾರಿನ ಸೇವೆ ಇದ್ದರೆ ಇದೀಗ ಕಳೆದ ಹದಿನೈದು ದಿನದಿಂದ ಮತ್ತೆ ಕಾರನ್ನು ಕೊರೊನಾ ವಾರಿಯರ್ಸ್ ಸೇವೆಗೆ ನೀಡಿದ್ದಾರೆ. ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆ ಕಳೆದ 15 ದಿನಗಳ ಹಿಂದೆ ಮೂಡಬಿದ್ರೆಯಲ್ಲಿ ಸಂಚಾರ ವ್ಯವಸ್ಥೆಗೆ ತೊಂದರೆಯಾದಾಗ ತಮ್ಮ ಕಾರುಗಳನ್ನು ನೀಡಿದ ಅವರು 2ನೇ ಲಾಕ್ಡೌನ್ ವೇಳೆಯು ಅದನ್ನು ಮುಂದುವರಿಸಿದ್ದಾರೆ. ಎರಡು ಕಾರು ನೀಡುವುದರ ಜೊತೆಗೆ ಅದಕ್ಕೆ ಇಬ್ಬರು ಚಾಲಕರು ಮತ್ತು ಇಂಧನ ವ್ಯವಸ್ಥೆಯನ್ನು ಮಾಜಿ ಸಚಿವ ಅಭಯಚಂದ್ರ ಜೈನ್ ಅವರು ನೀಡುತ್ತಿದ್ದಾರೆ.
ಈ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಆಸ್ಪತ್ರೆಗೆ ಸರಿಯಾಗಿ ಬಂದರೆ ಮಾತ್ರ ರೋಗಿಗಳಿಗೆ ಚಿಕಿತ್ಸೆ ಸರಿಯಾಗಿ ಸಿಗುತ್ತದೆ. ಕರ್ತವ್ಯ ನಿರ್ವಹಿಸುವ ಆಸ್ಪತ್ರೆ ಸಿಬ್ಬಂದಿಗೆ ತೊಂದರೆಯಾಗಬಾರದೆಂದು ಈ ವ್ಯವಸ್ಥೆ ಮಾಡಿದ್ದೇನೆ ಎಂದು ತಿಳಿಸಿದರು.