ಶಿರಸಿ (ಉತ್ತರ ಕನ್ನಡ) : ರಜಾ ದಿನ ಕಳೆಯಲು ತೆರಳಿದ್ದ ಒಂದೇ ಕುಟುಂಬದ ಐವರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಶಾಲ್ಮಲಾ ನದಿ ತೀರದ ನೆಲ್ಲಿಚೌಕದಲ್ಲಿ ಭಾನುವಾರ ನಡೆದಿದ್ದು, ಎಲ್ಲರ ಮೃತದೇಹಗಳು ಪತ್ತೆಯಾಗಿವೆ.
ಶಿರಸಿಯ ಭೈರುಂಭೆ ಸಮೀಪದ ಶಾಲ್ಮಲಾ ನದಿಯಲ್ಲಿ ನಿನ್ನೆ ಈ ದುರಂತ ಸಂಭವಿಸಿತ್ತು. ಮೃತರೆಲ್ಲರೂ ಶಿರಸಿ ನಗರದವರಾಗಿದ್ದಾರೆ. ರಾಮನಬೈಲಿನ ಮೊಹಮ್ಮದ್ ಸಲೀಂ ಕಲೀಲ್ (44), ನಾದಿಯಾ ನೂರ್ ಅಹಮದ್ ಶೇಖ್ (20), ಕಸ್ತೂರಬಾ ನಗರದ ಮಿಸ್ಬಾ ತಬಸುಮ್ (21), ರಾಮನಬೈಲಿನ ನಬಿಲ್ ನೂರ್ ಅಹಮದ್ ಶೇಖ್ (22), ರಾಮನಬೈಲಿನ ಯುವಕ ಉಮರ್ ಸಿದ್ದಿಕ್ (23) ಮೃತರು. ಸಾವನ್ನಪ್ಪಿರುವವರಲ್ಲಿ ನಾದಿಯಾ ನೂರ್ ಎಂಬುವರು ಕಳೆದ 16 ದಿನಗಳ ಹಿಂದಷ್ಟೇ ವಿವಾಹವಾಗಿದ್ದರು ಎಂದು ತಿಳಿದುಬಂದಿದೆ. ಸ್ಥಳಕ್ಕೆ ಅಗ್ನಿಶಾಮಕ ಮತ್ತು ಪೊಲೀಸ್ ಸಿಬ್ಬಂದಿ ಆಗಮಿಸಿ ಶೋಧ ಕಾರ್ಯ ನಡೆಸಿದ್ದು, ರಾತ್ರಿವರೆಗೆ ನಡೆದ ಕಾರ್ಯಾಚರಣೆಯಲ್ಲಿ ಎಲ್ಲರ ಮೃತದೇಹಗಳು ಪತ್ತೆಯಾಗಿವೆ.
ಘಟನೆ ನಡೆದಿದ್ದು ಹೇಗೆ ?: ಶಿರಸಿ ನಗರದ ರಾಮನಬೈಲು ಮತ್ತು ಕಸ್ತೂರಬಾ ನಗರದ ಒಂದೇ ಕುಟುಂಬದ ಸುಮಾರು 25 ಜನ ಭಾನುವಾರ ಶಾಲ್ಮಲಾ ನದಿಯ ಭೂತನಗುಂಡಿಯ ಬಳಿ ಅಡುಗೆ ತಯಾರಿ ನಡೆಸಿದ್ದರು. ಈ ವೇಳೆ ಅವರೊಂದಿಗೆ ಬಂದಿದ್ದ ಮಗುವೊಂದು ಆಟವಾಡುತ್ತ ಭೂತನಗುಂಡಿಯ ನೀರಿಗೆ ಬಿದ್ದಿದೆ. ತಕ್ಷಣವೇ ನೀರಿಗೆ ಜಿಗಿದ ಮೊಹಮ್ಮದ್ ಸಲೀಂ ಕಲೀಲ್ ಮಗುವನ್ನು ನೀರಿನಿಂದ ರಕ್ಷಿಸಿ, ನಾದಿಯಾ ಅವರಿಗೆ ನೀಡಿದ್ದರು. ಮಗುವನ್ನು ದಡಕ್ಕೆ ಬಿಟ್ಟು ನೀರಿನಿಂದ ಮೇಲೆ ಬರುವಾಗ ಕಾಲು ಜಾರಿ ನಾದಿಯಾ ಮತ್ತು ಮೊಹಮ್ಮದ್ ಇಬ್ಬರೂ ಮುಳುಗಿದ್ದಾರೆ. ಅವರನ್ನು ರಕ್ಷಿಸುವ ಸಲುವಾಗಿ ನೀರಿಗೆ ಜಿಗಿದ ಮತ್ತೆ ಮೂವರೂ ಸಹ ನೀರಿನಿಂದ ಮೇಲೇಳಲಾಗದೆ ಮುಳುಗಿ ಸಾವಿಗೀಡಾಗಿದ್ದಾರೆ. ಮಗು ಸುರಕ್ಷಿತವಾಗಿದೆ.
ಇನ್ನು. ಶಾಲ್ಮಲಾ ನದಿ ತೀರ ಪ್ರವಾಸಿ ತಾಣವಾಗಿದ್ದು, ರಜೆ ದಿನದಂದು ಇಲ್ಲಿಗೆ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿ ಇಲ್ಲಿಯೇ ಊಟ ತಯಾರಿಸಿ ಸಂಜೆಯವರೆಗೂ ಇದ್ದು ಹೋಗುತ್ತಾರೆ. ಘಟನೆ ನಡೆದ ಭೂತನಗುಂಡಿ ಆಳವಾಗಿದ್ದು, ಇಲ್ಲಿಯ ಕಲ್ಲುಬಂಡೆ ಜಾರುವುದರಿಂದ ನೀರಿಗಿಳಿಯದಂತೆ ಸೂಚನಾ ಫಲಕ ಅಳವಡಿಸಲಾಗಿದೆ.
ಇದನ್ನೂ ಓದಿ : ಶಿರಸಿ: ಶಾಲ್ಮಲಾ ನದಿಯಲ್ಲಿ ಮುಳುಗಿ ಒಂದೇ ಕುಟುಂಬದ ಐವರು ಸಾವು
ಈ ದುರಂತ ಭಾನುವಾರ ಮಧ್ಯಾಹ್ನ 2.30 ರ ವೇಳೆಗೆ ನಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ವಿಷಯ ತಿಳಿದ ಕುಟುಂಬಸ್ಥರು ಸೇರಿದಂತೆ ಸಮುದಾಯದ 200 ಕ್ಕೂ ಅಧಿಕ ಜನರು ಸ್ಥಳಕ್ಕೆ ಆಗಮಿಸಿದ್ದರು. ಶಿರಸಿಯ ಗೋಪಾಲ ಗೌಡ ನೇತೃತ್ವದ ತಂಡ ಮೃತದೇಹ ಹುಡುಕುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು, ಅವರಿಗೆ ಕುಟುಂಬದ ಕೆಲ ಯುವಕರು ಸಹಕರಿಸಿದರು. ಸ್ಥಳೀಯರು ಕಾರ್ಯಾಚರಣೆಗೆ ಅಗತ್ಯವಾದ ಬೆಳಕನ್ನು ಒದಗಿಸಿದರು. ರಾತ್ರಿ 9 ಗಂಟೆಯವರೆಗೆ ಕಾರ್ಯಾಚರಣೆ ನಡೆಸಲಾಯಿತು. ಪೊಲೀಸರು ಸಹ ಮಧ್ಯಾಹ್ನದಿಂದ ಅಲ್ಲೇ ಬೀಡುಬಿಟ್ಟು ಮೃತರ ದೇಹ ಹೊರತೆಗೆಯುವಲ್ಲಿ ಶ್ರಮಿಸಿದರು. ರಾತ್ರಿ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.