ಬಂಟ್ವಾಳ (ದಕ್ಷಿಣ ಕನ್ನಡ): ವಿಶ್ರಾಂತಿ ಕೊಠಡಿ, ಸ್ಯಾನಿಟರಿ ನ್ಯಾಪ್ಕಿನ್ ವ್ಯವಸ್ಥೆ, ದೂರದೂರಿನಿಂದ ಮಕ್ಕಳೊಂದಿಗೆ ಬರುವವರಿಗೆ ಹಾಲುಣಿಸುವ ಸೌಲಭ್ಯ, ಸ್ಯಾನಿಟರಿ ಪ್ಯಾಡ್ ವ್ಯವಸ್ಥೆ.. ಜೊತೆಗೆ ಬಟ್ಟೆ ಬದಲಾಯಿಸಿಕೊಳ್ಳಲು ಡ್ರೆಸ್ಸಿಂಗ್ ರೂಂ.. ಇಷ್ಟೆಲ್ಲ ಸೌಲಭ್ಯವನ್ನು ಒಂದೇ ಸೂರಿನಡಿ ಮಹಿಳೆಯರಿಗೆ ಕಲ್ಪಿಸುತ್ತೆ ಪಿಂಕ್ ಟಾಯ್ಲೆಟ್..
ಹೌದು, ಜನನಿಬಿಡ ಪ್ರದೇಶ, ಮಾರುಕಟ್ಟೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನೈರ್ಮಲ್ಯ ಕಾಪಾಡುವ ಉದ್ದೇಶದಿಂದ (ಪಿಂಕ್) ಗುಲಾಬಿ ಶೌಚಾಲಯಗಳನ್ನು ತೆರೆಯಲು ಕಳೆದ ವರ್ಷ ರಾಜ್ಯ ಸರ್ಕಾರ ನಿರ್ಧರಿಸಿತ್ತು. ಸರ್ಕಾರದ ನಿರ್ದೇಶನದಂತೆ ಮೈಸೂರಿನಲ್ಲಿ ಮೊದಲ ಪಿಂಕ್ ಟಾಯ್ಲೆಟ್ ನಿರ್ಮಿಸಿತ್ತು. ಇದೇ ಪಿಂಕ್ ಟಾಯ್ಲೆಟ್ ಇದೀಗ ಬಂಟ್ವಾಳದಲ್ಲಿ ತಲೆಎತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲನೆಯದ್ದು ಎಂಬ ಹೆಗ್ಗಳಿಕೆ ಪಡೆದಿದೆ.
ಅದರ ಮಹತ್ವವನ್ನು ಗಮನಿಸಿದ ಬಂಟ್ವಾಳ ಪುರಸಭೆ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ಅವರು ಬಂಟ್ವಾಳದಲ್ಲಿ ಪಿಂಕ್ ಟಾಯ್ಲೆಟ್ ನಿರ್ಮಿಸುವ ಯೋಜನೆಯ ಕುರಿತು ರೂಪುರೇಷೆ ತಯಾರಿಸಿದರು. ಹೀಗಾಗಿ ಬಂಟ್ವಾಳ ತಾಲೂಕು ಆಡಳಿತ ಸೌಧ (ಹಿಂದಿನ ಮಿನಿ ವಿಧಾನಸೌಧ)ದ ಗೇಟಿನ ಪಕ್ಕದಲ್ಲೇ ಫುಟ್ ಪಾತ್ ಇರುವ ಜಾಗದ ಸನಿಹದಲ್ಲಿ ಪಿಂಕ್ ಟಾಯ್ಲೆಟ್ ನಿರ್ಮಾಣವಾಗಿದೆ.
ಬಂಟ್ವಾಳ ತಾಲೂಕಿನ ಕೇಂದ್ರಭಾಗ ಬಿ. ಸಿ. ರೋಡಿನ ಕೈಕುಂಜೆ ರಸ್ತೆಯಲ್ಲಿ ಆಡಳಿತ ಸೌಧದ ಪಕ್ಕ ನಿರ್ಮಿಸಲಾದ ಈ ಶೌಚಾಲಯ ಮಹಿಳೆಯರ ಬಳಕೆಗೆಂದು ಮೀಸಲಾಗಿದೆ. ಅಮೃತ ನಿರ್ಮಲ ನಗರ ಯೋಜನೆಯಡಿ ಪಿಂಕ್ ಟಾಯ್ಲೆಟ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಬಂಟ್ವಾಳ ಪುರಸಭೆಗೆ ಅಮೃತ ನಿರ್ಮಲ ನಗರ ಯೋಜನೆಯ ಮೂಲಕ ಬಂಟ್ವಾಳ ಪುರಸಭೆಗೆ ಬಂದ 1 ಕೋಟಿ ರೂ. ಅನುದಾನದಲ್ಲಿ 25.5 ಲಕ್ಷ ರೂ. ವೆಚ್ಚದಲ್ಲಿ ಇದು ಸಿದ್ಧವಾಗಿದೆ.
ಬಿ.ಸಿ. ರೋಡ್ ಕೈಕುಂಜೆ ರಸ್ತೆಯಲ್ಲಿರುವ ಈ ಪಿಂಕ್ ಟಾಯ್ಲೆಟ್ ಕೇವಲ ಶೌಚಾಲಯವಲ್ಲ. ಬಿ.ಸಿ. ರೋಡಿಗೆ ಹತ್ತಾರು ಕೆಲಸಗಳಿಗೆ ಆಗಮಿಸುವ ಮಹಿಳೆಯರಿಗೆ ಹಲವು ರೀತಿಯಲ್ಲಿ ಅನುಕೂಲವೂ ಆಗಲಿದೆ. ಹಾಲುಣಿಸುವ ಮಕ್ಕಳಿರುವ ತಾಯಂದಿರು ಆಗಮಿಸಿದ ಸಂದರ್ಭ ಅವರಿಗೆ ಸರಿಯಾದ ಫೀಡಿಂಗ್ ರೂಮ್ ಇದಾಗಲಿದೆ.
ಸದ್ಯಕ್ಕೆ ಬಿ.ಸಿ. ರೋಡಿನ ಆಡಳಿತ ಸೌಧದಲ್ಲಿರುವ ಸಬ್ ರಿಜಿಸ್ಟ್ರಾರ್ ಕಚೇರಿ ಆವರಣದಲ್ಲಿ ಒಂದು ಫೀಡಿಂಗ್ ಸ್ಥಳದ ವ್ಯವಸ್ಥೆ ಇದ್ದರೂ ಎಲ್ಲರಿಗೂ ಅಲ್ಲಿಗೆ ಹೋಗಲು ಅನುಕೂಲವಂತೂ ಇಲ್ಲ. ಪೇಟೆಗೆ ಪುಟ್ಟ ಮಗುವಿನೊಂದಿಗೆ ಕೋರ್ಟ್, ಕಚೇರಿ, ಬ್ಯಾಂಕ್ಗಳಿಗೆ ಬರುವ ತಾಯಂದಿರಿಗೆ ಇಲ್ಲಿ ಹಾಲುಣಿಸುವುದಕ್ಕೆ ಪ್ರತ್ಯೇಕ ಜಾಗ ಮೀಸಲಾಗಿದೆ.
ಬೇರೆ ರಾಜ್ಯಗಳಲ್ಲೂ ಪಿಂಕ್ ಟಾಯ್ಲೆಟ್ ಯಶಸ್ವಿ: ಈಗಾಗಲೇ ಉತ್ತರ ಪ್ರದೇಶ, ತಮಿಳುನಾಡು ಸೇರಿದಂತೆ ರಾಷ್ಟ್ರದ ವಿವಿಧ ರಾಜ್ಯಗಳಲ್ಲಿ ಈ ಪಿಂಕ್ ಟಾಯ್ಲೆಟ್ಗಳು ಯಶಸ್ವಿಯಾಗಿವೆ. ಸದಾ ಜನದಟ್ಟಣೆ ಇರುವಂತಹ ಜಾಗ, ವಾಣಿಜ್ಯ ಸಂಕೀರ್ಣಗಳು, ಬಟ್ಟೆ, ಆಹಾರ, ಬೇಕರಿ, ಚಿನ್ನಾಭರಣ, ಬ್ಯಾಂಕ್, ಎಟಿಎಂ, ಮೊಬೈಲ್ ಫೋನ್ ಸೇರಿದಂತೆ ಅಂಗಡಿ-ಮಳಿಗೆಗಳು ಇರುವ ಜಾಗದಲ್ಲಿ ನಿತ್ಯ ಸಾವಿರಾರು ಜನ ಓಡಾಡುವಲ್ಲಿ ಇದು ಪ್ರಯೋಜನಕಾರಿಯಾಗಿದೆ. ಮದುವೆ, ಮುಂಜಿಯಿಂದ ಹಿಡಿದು ನಾನಾ ಶುಭ ಸಮಾರಂಭಗಳಿಗೆ ಸಾರ್ವಜನಿಕರು ಪೇಟೆಗೆ ಆಗಮಿಸುತ್ತಾರೆ. ಹಾಗಾಗಿ ಮಹಿಳೆಯರಿಗೆ ಅನುಕೂಲ ಆಗಲೆಂಬ ಉದ್ದೇಶದಿಂದ ಈ ವಿಶೇಷ ಶೌಚಾಲಯ ನಿರ್ಮಿಸಲಾಗಿದೆ.
ಇದನ್ನೂ ಓದಿ:ಕೊನೆಗೂ ಸುರಂಗ ಮಾರ್ಗದಲ್ಲಿ ತಾತ್ಕಾಲಿಕ ಸಂಚಾರಕ್ಕೆ ಅವಕಾಶ: ಸುರಕ್ಷತೆಗೆ ಪ್ರಾಧಿಕಾರವೇ ಹೊಣೆ ಎಂದ ಜಿಲ್ಲಾಡಳಿತ!