ಸುರತ್ಕಲ್(ಮಂಗಳೂರು): ಬಸ್ಗಳು ನಿಲ್ಲುವ ಜಾಗದಲ್ಲೊಂದು ಸಾಧಾರಣವಾಗಿರುವ ಬಸ್ ತಂಗುದಾಣ ಕಟ್ಟಡ ಇರುತ್ತದೆ. ಅಲ್ಲಿ ಯಾವುದೇ ವಿಶೇಷ ಮೂಲಸೌಲಭ್ಯಗಳು ಇರುವುದಿಲ್ಲ. ಆದರೆ ಸುರತ್ಕಲ್ನಲ್ಲಿ ಹೈಟೆಕ್ ಬಸ್ ನಿಲ್ದಾಣವನ್ನು ನೀವು ಕಾಣಬಹುದು. ಈ ಸುಸಜ್ಜಿತ ಬಸ್ ನಿಲ್ದಾಣ ಅತ್ಯಾಧುನಿಕ ವ್ಯವಸ್ಥೆಗಳಿಂದ ಗಮನ ಸೆಳೆಯುತ್ತಿದೆ. ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಗುತ್ತೆ ಸುರತ್ಕಲ್ನ ಗೋವಿಂದ ದಾಸ್ ಬಸ್ ನಿಲ್ದಾಣ. ಇದು ರಾಜ್ಯದ ಪ್ರಪ್ರಥಮ ಸುಸಜ್ಜಿತ ಹೈಟೆಕ್ ಬಸ್ ನಿಲ್ದಾಣವೂ ಹೌದು. ಸ್ಮಾರ್ಟ್ ಆ್ಯಂಡ್ ಡಿಜಿಟಲ್ ಸುರತ್ಕಲ್ ಯೋಜನೆಯಡಿ ಇದನ್ನು ರೂಪಿಸಲಾಗಿದೆ.
ಬಸ್ ಸ್ಟಾಪ್ನಲ್ಲಿ ಅಂಥದ್ದೇನಿದೆ?: ಮುಡಾದಿಂದ ನಿರ್ಮಿಸಲಾದ ಹೈಟೆಕ್ ಬಸ್ ನಿಲ್ದಾಣ 200 ಚದರಡಿ ವಿಸ್ತೀರ್ಣವಿದೆ. ಇದಕ್ಕಾಗಿ ಸುಮಾರು 30 ಲಕ್ಷ ರೂ ವ್ಯಯಿಸಲಾಗಿದೆ. ಶುದ್ದ ಕುಡಿಯುವ ನೀರು, 5 ಸಿಸಿ ಕ್ಯಾಮರಾ, ಉಚಿತ ವೈಫೈ ವ್ಯವಸ್ಥೆ, ಎಸ್‌ಓಎಸ್ ಬಟನ್, ಫ್ಯಾನ್, ನಗರ ಬಸ್ಗಳ ಸಮಯ ಮತ್ತು ಮಾಹಿತಿ ನೀಡುವ ಡಿಸ್‌ಪ್ಲೆ, ಅಗ್ನಿಶಾಮಕ ವ್ಯವಸ್ಥೆ, ಎಲ್ಇಡಿ ಬೆಳಕು, ಸೆಲ್ಪಿ ಪಾಯಿಂಟ್, ಮೊಬೈಲ್ ಲ್ಯಾಪ್‌ಟಾಪ್ ಚಾರ್ಜಿಂಗ್ ಪಾಯಿಂಟ್ ಇಲ್ಲಿದೆ.
ಕಿರುಕುಳ ನೀಡಿದ್ರೆ ಎಸ್‌ಓಎಸ್ ಬಟನ್ ಕ್ಲಿಕ್ ಮಾಡಿ! ಯುವತಿಯರು ಸೇಫ್: ಈ ಬಸ್ ನಿಲ್ದಾಣದಲ್ಲಿ ಯುವತಿಯರಿಗೆ ಯಾರಾದರೂ ಕಿರುಕುಳ ನೀಡಿದ್ದಲ್ಲಿ ಅಲ್ಲಿಯೇ ಇರುವ ಎಸ್‌ಓಎಸ್ ಬಟನ್ ಕ್ಲಿಕ್ ಮಾಡಿದರೆ ಸಾಕು. ಇಲ್ಲಿ ನಡೆದ ಘಟನೆಯ ದೃಶ್ಯಗಳೂ ಸೇರಿದಂತೆ ಇತರ ಮಾಹಿತಿಗಳು ನೇರವಾಗಿ ಪೊಲೀಸರಿಗೆ ರವಾನೆಯಾಗುತ್ತದೆ. ಅಷ್ಟೇ ಅಲ್ಲ, ಈ ಬಟನ್ ಕ್ಲಿಕ್ ಮಾಡಿದರೆ ಸ್ಥಳದಲ್ಲಿ ಸೈರನ್ ಕೂಡಾ ಆಗುತ್ತದೆ. ಸುರತ್ಕಲ್ ಪೊಲೀಸ್ ಠಾಣೆ, ಠಾಣೆಯ ಇನ್ಸ್ ಪೆಕ್ಟರ್, ಪೊಲೀಸ್ ಕಮೀಷನರ್, ಡಿಸಿಪಿ ಕಾನೂನು ಸುವ್ಯವಸ್ಥೆ ವಿಭಾಗ, 112 ಕಂಟ್ರೋಲ್ ರೂಂಗೆ ಸಂದೇಶ ರವಾನೆಯಾಗುತ್ತದೆ. ಸಿಸಿಟಿವಿಯಲ್ಲಿ ದೃಶ್ಯಗಳು ದಾಖಲಾಗುತ್ತದೆ.
ಹೈಟೆಕ್ ಬಸ್ ಸ್ಟಾಪ್-ಶಾಸಕರ ಮಾತು: ಈ ಬಗ್ಗೆ ಪ್ರತಿಕ್ರಿಯಿಸಿರುವ ಮಂಗಳೂರು ಉತ್ತರ ಶಾಸಕ ಡಾ ವೈ.ಭರತ್ ಶೆಟ್ಟಿ, 'ಈ ಹೈಟೆಕ್ ಬಸ್ ನಿಲ್ದಾಣಕ್ಕೆ ವಿದ್ಯಾರ್ಥಿಗಳು ಮತ್ತು ರಾತ್ರಿ ಬೆಂಗಳೂರಿಗೆ ಹೋಗುವ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಇಲ್ಲಿ ಉಚಿತ ವೈ ಫೈ ನೀಡಲಾಗಿದೆ. ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗಾಗಿ ಎಸ್‌ಓಎಸ್ ಬಟನ್ ಇಟ್ಟಿದ್ದೇವೆ. ಈ ಬಟನ್ ಒತ್ತಿದ ಕೂಡಲೇ ಸ್ಥಳದಲ್ಲಿ ಸೈರನ್ ಆಗುತ್ತದೆ. ಪೊಲೀಸ್ ಠಾಣೆಗಳಿಗೆ ಮಾಹಿತಿ ಹೋಗುತ್ತದೆ. ಬಳಿಕ ಪೊಲೀಸರ ಬಳಿ ಇರುವ ಕೀ ಯಿಂದ ಸೈರನ್ ಆಫ್ ಮಾಡಬೇಕಾಗುತ್ತದೆ' ಎಂದರು.
ಸಾರ್ವಜನಿಕರು ಹೇಳಿದ್ದೇನು?: ಸ್ಥಳೀಯ ನಿವಾಸಿ ಮುಹಮ್ಮದ್ ಶರೀಫ್ ಮಾತನಾಡಿ, 'ಇದು ಒಳ್ಳೆಯ ಕೆಲಸ. ಇಲ್ಲಿ ಮಳೆಗಾಲದಲ್ಲಿ ಲೀಕೇಜ್‌ನಂತಹ ಸಮಸ್ಯೆ ಇತ್ತು. ವೈಫೈ, ನೀರು, ಕುಳಿತುಕೊಳ್ಳುವ ಆಸನ ವ್ಯವಸ್ಥೆ ಇದೆ. ಬಸ್ ನಿಲ್ದಾಣದ ಸಮೀಪ ಖಾಸಗಿ ಸಂಸ್ಥೆಯ ಸಹಕಾರದೊಂದಿಗೆ ಅಲ್ಟ್ರಾ ಮಾಡರ್ನ್ ಶೌಚಾಲಯ ನಿರ್ಮಾಣದ ಯೋಜನೆ ಇದೆ' ಎಂದು ತಿಳಿಸಿದರು.
ಇದನ್ನೂ ಓದಿ: ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಸಿಗಲ್ಲ ಯಶ್: ಸರ್ಪ್ರೈಸ್ ಸುಳಿವು ಕೊಟ್ಟ ಕೆಜೆಎಫ್ ಸ್ಟಾರ್!