ಮಂಗಳೂರು: ನಗರದ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳ ನಡುವೆ ನಡೆದ ಮಾರಾಮಾರಿಯಲ್ಲಿ ಇಬ್ಬರು ಗಾಯಗೊಂಡ ಘಟನೆ ನಡೆದಿದೆ.
ವಿಚಾರಣಾಧೀನ ಕೈದಿಗಳಾದ ಅನ್ಸಾರ್ ಹಾಗೂ ಜೈನುದ್ದೀನ್ ಗಾಯಗೊಂಡವರು. ಪಣಂಬೂರು ಠಾಣಾ ವ್ಯಾಪ್ತಿಯಲ್ಲಿ ನಡೆದ ದರೋಡೆ ಪ್ರಕರಣದಲ್ಲಿ ಬಂಧಿತನಾದ ಸಮೀರ್ ಎಂಬಾತ ಸ್ಟೀಲ್ ಚಮಚ ಹಾಗೂ ಇನ್ನಿತರ ಸಾಮಗ್ರಿಗಳಿಂದ ಜೈಲಿನಲ್ಲಿರುವ ವಿಚಾರಣಾಧೀನ ಕೈದಿಗಳ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
ಪರಿಣಾಮ ಮುಲ್ಕಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣವೊಂದರ ಆರೋಪಿ ಅನ್ಸಾರ್ ಹಾಗೂ ಮೂಡುಬಿದಿರೆ ದರೋಡೆ ಪ್ರಕರಣದಲ್ಲಿ ಜೈಲು ಸೇರಿರುವ ಜೈನುದ್ದೀನ್ ಗಾಯಗೊಂಡಿದ್ದಾರೆ. ಅನ್ಸಾರ್ ಕೈ ಹಾಗೂ ಕಾಲಿಗೆ ಗಾಯವಾಗಿದ್ದರೆ, ಜೈನುದ್ದೀನ್ ಭುಜ ಹಾಗೂ ಬೆನ್ನಿಗೆ ಗಾಯಗಳಾಗಿದೆ. ಸದ್ಯ ಇಬ್ಬರನ್ನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ಸುದ್ದಿ ತಿಳಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಎನ್. ಹಾಗೂ ಡಿಸಿಪಿ ಹರಿರಾಂ ಶಂಕರ್ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಓದಿ: 11 ಮೀನುಗಾರರು ನಾಪತ್ತೆ: ಅರಬ್ಬಿ ಸಮುದ್ರದಲ್ಲಿ ಬೋಟ್ ಅವಶೇಷ ಪತ್ತೆ