ಮಂಗಳೂರು: ಸುರತ್ಕಲ್ನಲ್ಲಿ ಗುರುವಾರ ಸಂಜೆ ಕೊಲೆಗೀಡಾಗ ಯುವಕ ಫಾಜಿಲ್ ಮೃತದೇಹದ ಅಂತ್ಯಕ್ರಿಯೆಯು ಹುಟ್ಟೂರು ಮಂಗಳಪೇಟೆಯಲ್ಲಿ ನಡೆಯಿತು. ಮೊದಲು ಮನೆಗೆ ಮೃತದೇಹ ತೆಗೆದುಕೊಂಡು ಹೋದ ಬಳಿಕ ಮಸೀದಿ ಬಳಿ ಕರೆತರಲಾಗಿತ್ತು. ಅಂತ್ಯಸಂಸ್ಕಾರಕ್ಕೆ ಭಾರಿ ಜನಸ್ತೋಮ ಭಾಗವಹಿಸಿತ್ತು.
ಕಳೆದ ರಾತ್ರಿ ಸುರತ್ಕಲ್ನಲ್ಲಿ ಅಂಗಡಿಯೊಂದರ ಮುಂದೆ ನಿಂತಿದ್ದ ಫಾಜಿಲ್ ಮೇಲೆ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆಗೈದಿದ್ದರು. ದಾಳಿಯಿಂದ ಗಂಭೀರ ಗಾಯಗೊಂಡ ಆತನನ್ನು ಮಂಗಳೂರಿನ ಅಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅದಾಗಲೇ ಮೃತಪಟ್ಟಿದ್ದ. ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮನೆಯವರಿಗೆ ಹಸ್ತಾಂತರಿಸಲಾಗಿತ್ತು.
ಮಂಗಳಪೇಟೆಯ ಮೊಹಿದ್ದೀನ್ ಜುಮ್ಮಾ ಮಸೀದಿಯ ಕಬರ್ ಸ್ಥಾನದಲ್ಲಿ ಅಂತ್ಯಸಂಸ್ಕಾರ ನೆರವೇರಿದೆ. ಸ್ಥಳದಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದು, ಯುವಕ ಫಾಜಿಲ್ ಅಂತಿಮ ದರ್ಶನ ಪಡೆದರು. ಅಹಿತಕರ ಘಟನೆ ನಡೆಯದಂತೆ ಸುರತ್ಕಲ್ ಸುತ್ತಮುತ್ತಲಿನ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಈ ಪ್ರದೇಶದಲ್ಲಿ ಅಂಗಡಿ ಮುಂಗಟ್ಟು ಬಂದ್ ಆಗಿದ್ದು, ವಾಹನ ಸಂಚಾರ ತೀರ ಕಡಿಮೆ ಪ್ರಮಾಣದಲ್ಲಿದೆ.
ಇದನ್ನೂ ಓದಿ: ಸುರತ್ಕಲ್ ಯುವಕನ ಹತ್ಯೆ: ನಿಷೇಧಾಜ್ಞೆ ಜಾರಿ, ಶಾಲಾ-ಕಾಲೇಜಿಗೆ ರಜೆ, ಮದ್ಯದಂಗಡಿ ಬಂದ್