ಕಡಬ(ದಕ್ಷಿಣ ಕನ್ನಡ): ಲಾಕ್‍ಡೌನ್ ಪರಿಸ್ಥಿತಿಯನ್ನು ಸದುಪಯೋಗಪಡಿಸಿಕೊಳ್ಳಲು ಪುತ್ತೂರು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮುಂದಾಗಿದ್ದಾರೆ. ಗದ್ದೆಯಲ್ಲಿ ಭತ್ತದ ನಾಟಿ ಮಾಡುವ ಮೂಲಕ ಸುದ್ದಿಯಾಗುವ ಜೊತೆಗೆ ಇತರರಿಗೂ ಮಾದರಿಯಾಗಿದ್ದಾರೆ.
ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ಹಾಗೂ ಕಾಂಗ್ರೆಸ್ ಮುಂದಾಳು ಶಕುಂತಳಾ ಶೆಟ್ಟಿಯವರಿಗೂ ಲಾಕ್‍ಡೌನ್ ಬಿಸಿ ತಟ್ಟಿದೆ. ಲಾಕ್‍ಡೌನ್ ಘೋಷಣೆಯಾದ ಬಳಿಕ ಮನೆಯಲ್ಲೇ ಇದ್ದು ರಾಜಕೀಯದಲ್ಲಿ ತೊಡಗಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ತವರು ಮನೆಯಲ್ಲಿನ ಗದ್ದೆ ಬೇಸಾಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಲಾಕ್‍ಡೌನ್ ಸಮಯವನ್ನು ಭರಪೂರವಾಗಿ ಉಪಯೋಗಿಸಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ.
ಭತ್ತ ನಾಟಿ ಮಾಡುವುದರಿಂದ ಹಿಡಿದು, ನಾಟಿ ಸಂಗ್ರಹಿಸುವ ಕಾರ್ಯದಲ್ಲೂ ತೊಡಗಿಸಿಕೊಂಡ ಶಕುಂತಲಾ ಶೆಟ್ಟಿ, ಗದ್ದೆಯ ಕೆಲಸ ಖುಷಿ ತರುತ್ತದೆ ಎಂದು ಈಟಿವಿ ಭಾರತ ಜೊತೆಗೆ ತಮ್ಮ ಸಂತಸ ಹಂಚಿಕೊಂಡಿದ್ದಾರೆ. ಎಲ್ಲ ಕೆಲಸಗಳಿಗಿಂತಲೂ ಶ್ರೇಷ್ಠವಾದುದ್ದು ಕೃಷಿ ಕೆಲಸ. ಭತ್ತ ಬೆಳೆದರೆ ಮಾತ್ರ ದೇಶದ ಎಲ್ಲ ಜನರಿಗೂ ಆಹಾರ ಪೂರೈಕೆಯಾಗುತ್ತದೆ ಎನ್ನುತ್ತಾರೆ ಶೆಟ್ಟಿ.
ಮಂಗಳೂರಿನ ಹೊರವಲಯದ ಕುತ್ತಾರಿನ ಬೋಳ್ಯಗುತ್ತು ಎಂಬುದು ಶಕುಂತಳಾ ಶೆಟ್ಟಿ ಅವರ ತವರು ಮನೆ. ಈ ಗುತ್ತಿನ ಮನೆಗೆ ಸೇರಿದ 15 ವರ್ಷಗಳಿಂದ ಬೇಸಾಯ ಮಾಡದೇ ಉಳಿದಿದ್ದ ಸುಮಾರು ಮೂರು ಎಕರೆ ಗದ್ದೆಯಲ್ಲಿ ಈ ವರ್ಷ ಭತ್ತದ ನಾಟಿ ಮಾಡಲಾಗುತ್ತಿದೆ.