ಕಡಬ (ದಕ್ಷಿಣ ಕನ್ನಡ): ಜಿಲ್ಲೆಯಲ್ಲಿ 2023ರ ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಪರವಾನಗಿ ಹೊಂದಿದ ಆಯುಧಗಳಿಗೆ ಠೇವಣಿ ವಿನಾಯಿತಿ ನೀಡುವ ಬಗ್ಗೆ ಸ್ರ್ಕೀನಿಂಗ್ ಸಮಿತಿಯ ನಡಾವಳಿಯ ಹಿನ್ನೆಲೆಯಲ್ಲಿ, ಸ್ಕ್ರೀನಿಂಗ್ ಸಮಿತಿ ತಿರಸ್ಕರಿಸಿದ ಕೋವಿಗಳನ್ನು ಹೊರತುಪಡಿಸಿ ಉಳಿದ ಕೋವಿಗಳಿಗೆ ಠೇವಣಿ ಇಡುವುದರಿಂದ ವಿನಾಯಿತಿ ನೀಡಲಾಗಿದೆ.
ಮುಕ್ತ, ನ್ಯಾಯಯುತ ಹಾಗೂ ನಿಷ್ಪಕ್ಷಪಾತ ಚುನಾವಣೆಯನ್ನು ಖಾತ್ರಿಪಡಿಸಲು ಚು.ಆಯೋಗವು ಹಲವು ಮಾರ್ಗಸೂಚಿ ಮತ್ತು ಆದೇಶಗಳನ್ನು ಹೊರಡಿಸಿದೆ. ಚುನಾವಣೆಯ ಅವಧಿಯಲ್ಲಿ ಸಾರ್ವಜನಿಕ ಶಾಂತಿ ಸುವ್ಯವಸ್ಥೆ ಮತ್ತು ಸುರಕ್ಷತೆ ಕಾಪಾಡುವ ದೃಷ್ಟಿಯಿಂದ ಎಲ್ಲ ಆಯುಧ ಪರವಾನಗಿದಾರರಿಗೆ ತಮ್ಮ ಶಸ್ತ್ರಾಸ್ತ್ರಗಳನ್ನು ಹತ್ತಿರದ ಪೊಲೀಸ್ ಠಾಣೆಯಲ್ಲಿ/ಅಧಿಕೃತ ಕೋವಿ ಮದ್ದುಗುಂಡು ವ್ಯಾಪಾರಿಗಳಲ್ಲಿ ನಮೂನೆ 8ರಂತೆ ಠೇವಣಿ ಇಡುವಂತೆ ದಿನಾಂಕ 29-03-2013 ರಂದು ಆದೇಶ ಹೊರಡಿಸಲಾಗಿತ್ತು.
ಈ ನಡುವೆ ಕೃಷಿ ಚಟುವಟಿಕೆಗಳಿಗೆ ತೊಂದರೆ ಆಗುತ್ತಿದ್ದು ಪರವಾನಗಿದಾರರು ಶಸ್ತ್ರಾಸ್ತ್ರ ಠೇವಣಿ ಇಡುವುದರಿಂದ ವಿನಾಯಿತಿ ಕೋರಿ ಸಲ್ಲಿಸಿರುವ ಅರ್ಜಿಗಳನ್ನು ಪರಿಶೀಲಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ದಕ್ಷಿಣ ಕನ್ನಡ ಜಿಲ್ಲಾ ದಂಡಾಧಿಕಾರಿ, ಜಿಲ್ಲಾ ಪೊಲೀಸ್ ಅಧೀಕ್ಷಕರನ್ನು ಒಳಗೊಂಡ ಜಿಲ್ಲಾ ಮಟ್ಟದ ಸ್ಕ್ರೀನಿಂಗ್ ಸಮಿತಿ ರಚಿಸಲಾಗಿತ್ತು.
ಈಗಾಗಲೇ ಶಸ್ತ್ರಾಸ್ತ್ರ ಠೇವಣಿ ಇಡುವುದರಿಂದ ವಿನಾಯಿತಿ ಕೋರಿ ಬಂದಿರುವ ಅರ್ಜಿಗಳನ್ನು ಪ್ರತ್ಯೇಕವಾಗಿ ಕೂಲಂಕಷವಾಗಿ ಪರಿಶೀಲಿಸಲಾಗಿದ್ದು, ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಕೃಷಿ ರಕ್ಷಣೆಗಾಗಿ ವಿನಾಯಿತಿ ಕೋರಿ ಬಂದಿರುವ ಮನವಿಗಳನ್ನು ಸ್ವೀಕರಿಸಿ, ವರದಿ ಸಲ್ಲಿಸಲು ಆಯಾ ತಾಲೂಕುಗಳ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಪೊಲೀಸ್ ಉಪನಿರೀಕ್ಷಕರು, ವಲಯ ಅರಣ್ಯಾಧಿಕಾರಿ, ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ, ಸಹಾಯಕ ನಿರ್ದೇಶಕರು, ತೋಟಗಾರಿಕಾ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಲಾಯಿತು. ಸ್ಕ್ರೀನಿಂಗ್ ಸಮಿತಿಯ ಶಿಫಾರಸು ಮತ್ತು ತಿರಸ್ಕೃತ ಪ್ರಸ್ತಾವನೆಗಳನ್ನು ಪರಿಶೀಲಿಸಿ ಈ ಕೆಳಕಂಡಂತೆ ತಾಲೂಕುವಾರು ಕೋವಿಗಳಿಗೆ ಠೇವಣಿ ವಿನಾಯಿತಿ ನೀಡಲಾಗಿದೆ.
ಬೆಳ್ತಂಗಡಿ: ತಾಲೂಕಿನಲ್ಲಿ ಒಟ್ಟು 65 ಅರ್ಜಿಗಳು ಸ್ವೀಕೃತವಾಗಿವೆ. ಅದರಲ್ಲಿ 54 ಅರ್ಜಿಗಳನ್ನು ಚುನಾವಣಾ ಸಂದರ್ಭದಲ್ಲಿ ತಮ್ಮ ಬೆಳೆಗಳನ್ನು ಕಾಡುಪ್ರಾಣಿಗಳಿಂದ ಕೃಷಿ ಸಂರಕ್ಷಣೆ ಮಾಡಿಕೊಳ್ಳುವ ದೃಷ್ಟಿಯಿಂದ ಪೊಲೀಸ್ ಅಥವಾ ಅಧೀಕೃತ ಕೋವಿ ಮತ್ತು ಮದ್ದುಗುಂಡುಗಳ ವ್ಯಾಪಾರಸ್ಥರದಲ್ಲಿ ಠೇವಣಿ ಇರಿಸುವುದರಿಂದ ವಿನಾಯಿತಿ ನೀಡಲಾಗಿದೆ. ಉಳಿದ 11 ಅರ್ಜಿಗಳನ್ನು ಸ್ಕ್ರೀನಿಂಗ್ ಸಮಿತಿ ತಿರಸ್ಕರಿಸಿದೆ.
ಬಂಟ್ವಾಳ: ತಾಲೂಕಿನಿಂದ ಜಿಲ್ಲಾ ಮಟ್ಟದ ಸ್ಕ್ರೀನಿಂಗ್ ಸಮಿತಿಗೆ ಕೃಷಿ ರಕ್ಷಣೆಗಾಗಿ ಒಟ್ಟು 25 ಅರ್ಜಿಗಳು ಸ್ವೀಕೃತವಾಗಿವೆ. ಅದರಲ್ಲಿ 22 ಅರ್ಜಿಗಳನ್ನು ಚುನಾವಣಾ ಸಂದರ್ಭದಲ್ಲಿ ಆಯುಧ ಠೇವಣಿ ಇರಿಸುವುದರಿಂದ ವಿನಾಯಿತಿ ನೀಡಲಾಗಿದೆ. ಉಳಿದ 3 ಅರ್ಜಿಗಳನ್ನು ವಿನಾಯಿತಿ ನೀಡುವ ಕೋರಿಕೆಯನ್ನು ತಿರಸ್ಕರಿಸಲಾಗಿದೆ.
ಪುತ್ತೂರು: ಪುತ್ತೂರು ತಾಲೂಕಿನಿಂದ ಜಿಲ್ಲಾ ಮಟ್ಟದ ಸ್ಕ್ರೀನಿಂಗ್ ಸಮಿತಿಗೆ ಕೃಷಿ ರಕ್ಷಣೆಗಾಗಿ ಒಟ್ಟು 101 ಅರ್ಜಿಗಳು ಸ್ವೀಕೃತವಾಗಿವೆ. ಅದರಲ್ಲಿ 22 ಅರ್ಜಿಗಳನ್ನು ಚುನಾವಣಾ ಸಂದರ್ಭದಲ್ಲಿ ಆಯುಧ ಠೇವಣಿ ಇರಿಸುವುದರಿಂದ ವಿನಾಯಿತಿ ನೀಡಲಾಗಿದೆ. ಉಳಿದ 79 ಅರ್ಜಿಗಳ ಕೋರಿಕೆಯನ್ನು ತಿರಸ್ಕರಿಸಲಾಗಿದೆ.
ಸುಳ್ಯ: ತಾಲೂಕಿನಿಂದ ಜಿಲ್ಲಾ ಮಟ್ಟದ ಸ್ಕ್ರೀನಿಂಗ್ ಸಮಿತಿಗೆ ಕೃಷಿ ರಕ್ಷಣೆಗಾಗಿ ಒಟ್ಟು 578 ಅರ್ಜಿಗಳು ಸ್ವೀಕೃತವಾಗಿವೆ. ಅದರಲ್ಲಿ 277 ಅರ್ಜಿಗಳನ್ನು ಚುನಾವಣಾ ಸಂದರ್ಭದಲ್ಲಿ ಆಯುಧ ಠೇವಣಿ ಇರಿಸುವುದರಿಂದ ವಿನಾಯಿತಿ ನೀಡಲಾಗಿದೆ. ಉಳಿದ 301 ಆರ್ಜಿಗಳನ್ನು ಆಯುಧ ಠೇವಣಿ ಇರಿಸುವುವ ಕೋರಿಕೆಯಿಂದ ತಿರಸ್ಕೃತಗೊಂಡಿದೆ.
ಕಡಬ: ತಾಲೂಕಿನಿಂದ ಜಿಲ್ಲಾ ಮುಟ್ಟದ ಸ್ತ್ರೀಸಿಂಗ್ ಸಮಿತಿಗೆ ಕೃಷಿ ರಕ್ಷಣೆಗಾಗಿ ಒಟ್ಟು 148 ಅರ್ಜಿಗಳು ಸ್ವೀಕೃತವಾಗಿವೆ. ಅದರಲ್ಲಿ 138 ಅರ್ಜಿಗಳನ್ನು ಚುನಾವಣಾ ಸಂದರ್ಭದಲ್ಲಿ ಆಯುಧ ಠೇವಣಿ ಇಡುವುದರಿಂದ ವಿನಾಯಿತಿ ನೀಡಲಾಗಿದೆ. ಉಳಿದ 10 ಅರ್ಜಿಗಳನ್ನು ಸ್ಕ್ರೀನಿಂಗ್ ಸಮಿತಿ ತಿರಸ್ಕರಿಸಿರುವ ಹಿನ್ನೆಲೆಯಲ್ಲಿ ವಿನಾಯಿತಿ ಕೋರಿಕೆಯನ್ನು ನಿರಾಕರಿಸಲಾಗಿದೆ.
ಇದನ್ನೂ ಓದಿ: ಹೊಸಪೇಟೆಯಲ್ಲಿ ಮತದಾನ ಜಾಗೃತಿ ಮೂಡಿಸಿದ ಮಂಗಳಮುಖಿಯರು: ವಿಡಿಯೋ