ಮಂಗಳೂರು : ದ.ಕ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ರವಿವಾರ ಮತ್ತೆ ಎಂಟು ಮಂದಿ ಬಲಿಯಾಗಿದ್ದು, ಈ ಮೂಲಕ ಮೃತರ ಸಂಖ್ಯೆ 123 ಕ್ಕೇರಿದೆ. ಮೃತರೆಲ್ಲರೂ 45 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದು, ವಿವಿಧ ರೋಗದಿಂದ ಬಳಲುತ್ತಿದ್ದರು.
ಇಂದು ಮೃತಪಟ್ಟವರಲ್ಲಿ ಓರ್ವರು ಮಹಿಳೆಯಾಗಿದ್ದು, 7 ಮಂದಿ ಪುರುಷರಾಗಿದ್ದಾರೆ. ಅಲ್ಲದೇ ಮೃತರಲ್ಲಿ ಪುತ್ತೂರಿನ ಪುರುಷರೋರ್ವರನ್ನು ಬಿಟ್ಟರೆ, ಮಿಕ್ಕವರೆಲ್ಲಾ ಮಂಗಳೂರಿನವರಾಗಿದ್ದಾರೆ. ಮೃತರ ಪೈಕಿ 71 ವರ್ಷದ ಪುರುಷ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರೆ, 70 ವರ್ಷದ ವ್ಯಕ್ತಿಯೋರ್ವರು ಶ್ವಾಸಕೋಶದ ತೊಂದರೆ, ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದು ಇದೀಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
55 ವರ್ಷದ ವ್ಯಕ್ತಿಯೋರ್ವರು ಮೂತ್ರಪಿಂಡ ತೊಂದರೆಯಿಂದ ಮೃತಪಟ್ಟಿದ್ದರು. 56 ವರ್ಷದ ವ್ಯಕ್ತಿ ಹೃದಯ ಸಂಬಂಧಿ ತೊಂದರೆಯಿಂದ ಬಳಲುತ್ತಿದ್ದು, ಇದೀಗ ಮೃತಪಟ್ಟಿದ್ದಾರೆ. 72 ವರ್ಷದ ವ್ಯಕ್ತಿ ಮೂತ್ರಪಿಂಡ ವೈಫಲ್ಯ ಸೇರಿ ವಿವಿಧ ರೋಗದಿಂದ ಬಳಲುತ್ತಿದ್ದರೆ, 45 ವರ್ಷದ ಶ್ವಾಸಕೋಶ ಸಂಬಂಧಿರೋಗದಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. 55 ವರ್ಷದ ವ್ಯಕ್ತಿ ಹಾಗೂ 70 ವರ್ಷದ ವೃದ್ಧ ವಿವಿಧ ರೋಗದಿಂದ ಬಳಲುತ್ತಿದ್ದು ಇದೀಗ ಮೃತಪಟ್ಟಿದ್ದಾರೆ.
ದ.ಕ.ಜಿಲ್ಲೆಯಲ್ಲಿ ಇಂದು 199 ಮಂದಿಯಲ್ಲಿ ಕೋವಿಡ್ ಸೋಂಕು ದೃಢಗೊಂಡಿದ್ದು, ಇವರಲ್ಲಿ ಪ್ರಾಥಮಿಕ ಸಂಪರ್ಕದಿಂದ 31 ಮಂದಿಗೆ ಸೋಂಕು ತಗುಲಿದ್ದು, ಇಲ್ಲಿ ಪ್ರಕರಣದಲ್ಲಿ 73 ಮಂದಿಯಲ್ಲಿ ಸೋಂಕು ದೃಢಗೊಂಡಿದೆ. ಸಾರಿ ಪ್ರಕರಣದಲ್ಲಿ 10 ಮಂದಿಯಲ್ಲಿ ಸೋಂಕು ದೃಢಗೊಂಡರೆ, ಅಂತರಾಷ್ಟ್ರೀಯ ಪ್ರಯಾಣದಿಂದ ಇಬ್ಬರಲ್ಲಿ ಸೋಂಕು ಕಂಡು ಬಂದಿದ್ದರೆ 83 ಮಂದಿಯ ಸೋಂಕಿನ ಮೂಲ ಇನ್ನು ಪತ್ತೆ ಹಚ್ಚಬೇಕಿದೆ.
ಇನ್ನು 90 ಮಂದಿ ಸೋಂಕಿತರು ಇಂದು ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ದ.ಕ.ಜಿಲ್ಲೆಯಲ್ಲಿ ಈವರೆಗೆ 33,649 ಮಂದಿಯ ಗಂಟಲು ದ್ರವ ತಪಾಸಣೆ ಮಾಡಲಾಗಿದ್ದು, 28,838 ಮಂದಿಯಲ್ಲಿ ನೆಗೆಟಿವ್ ವರದಿ ಬಂದಿದ್ದು, 4,811 ಮಂದಿಯಲ್ಲಿ ಸೋಂಕು ದೃಢಗೊಂಡಿದೆ. ಇವರಲ್ಲಿ ಒಟ್ಟು 2,217 ಮಂದಿ ಸೋಂಕಿತರು ಗುಣಮುಖರಾಗಿ ಮನೆಗೆ ತೆರಳಿದ್ದು, 2,471 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.