ಬೆಳ್ತಂಗಡಿ: ತಾಲೂಕಿನ ಕಲ್ಮಂಜ ಗ್ರಾಮದ ನಿಡಿಗಲ್ ಮಜಲು ನಿವಾಸಿಗಳಾದ ಗೋಪಾಲ ಮಡಿವಾಳ ಹಾಗೂ ಶೇಖರ ಮಡಿವಾಳ ಅವರ ಗದ್ದೆಯಲ್ಲಿ ಹದ್ದುಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ.
ಎರಡು ಹದ್ದುಗಳು ಸತ್ತು ಮೂರು ದಿನ ಆಗಿರುವ ಸಾಧ್ಯತೆಯಿದ್ದು, ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ. ಇದರಿಂದ ಪರೀಕ್ಷೆಗೆ ಮಾದರಿ ಸಂಗ್ರಹಿಸಲು ಅಸಾಧ್ಯವಾಗಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಸ್ಥಳಕ್ಕೆ ಆರೋಗ್ಯ ಇಲಾಖೆ ಭೇಟಿ ನೀಡಿದ್ದು ಸುತ್ತಮುತ್ತಲ ಪರಿಸರದಲ್ಲಿ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.
ಪರಿಸರದ ತೆಂಗಿನ ಮರಗಳಲ್ಲಿ ಹದ್ದುಗಳು ಗೂಡು ಕಟ್ಟಿರುವುದರಿಂದ ಇದೇ ಪ್ರದೇಶದಲ್ಲಿ ಹೆಚ್ಚಾಗಿ ವಾಸಿಸುತ್ತಿವೆ. ಘಟನೆಗೆ ಹಕ್ಕಿ ಜ್ವರವೇ ಕಾರಣವೋ ಅಥವಾ ತಮ್ಮಲ್ಲೇ ಘರ್ಷಣೆಯಿಂದ ಸಾವಿಗೀಡಾಗಿವೆಯೋ ಎಂಬುದು ಸ್ಪಷ್ಟವಾಗಿಲ್ಲ. ಆದರೂ ಸಮೀಪದ ಸುಮಾರು 25 ಮನೆಗಳಿಗೆ ಎಚ್ಚರಿಕೆ ನೀಡಲಾಗಿದೆ. ಮನೆ ಮಂದಿಯಲ್ಲಿ ಜ್ವರ ಲಕ್ಷಣ ಇದೆಯಾ ಎಂಬ ಕುರಿತು ಸರ್ವೇ ನಡೆಸಲಾಗುವುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಓದಿ...ಭಾರತದ ಮೇಲೆ ಮತ್ತೊಂದು ಮಾರಕ ವೈರಸ್ ದಾಳಿ... ಹಕ್ಕಿಜ್ವರ ಕುರಿತು ನಿರ್ಲಕ್ಷ್ಯ ಬೇಡ..!
ಸ್ಥಳಕ್ಕೆ ತಾಲೂಕು ಆರೋಗ್ಯಾಧಿಕಾರಿ ಡಾ. ಕಲಾಮಧು, ಪಶುವೈದ್ಯಾಧಿಕಾರಿ ಡಾ. ಯತೀಶ್, ಕಲ್ಮಂಜ ಗ್ರಾ.ಪಂ. ಪಿಡಿಒ ಇಮ್ತಿಯಾಜ್, ಆರೋಗ್ಯ ಇಲಾಖೆಯಿಂದ ಗಿರೀಶ್ ಮತ್ತು ಸೋಮನಾಥ್, ಅರಣ್ಯ ರಕ್ಷಕ ರಾಜೇಶ್, ಆಶಾ ಕಾರ್ಯಕರ್ತೆ ಭೇಟಿ ನೀಡಿದ್ದಾರೆ.