ಬಂಟ್ವಾಳ: ಹಿರಿಯ ಸಾಹಿತಿ ಪಡಾರು ಮಹಾಬಲೇಶ್ವರ ಭಟ್ ಮಂಚಿ (89) ಅವರಿಗೆ ಡಾ. ಕೋಟ ಶಿವರಾಮ ಕಾರಂತರ ಹೆಸರಿನಲ್ಲಿ ನೀಡುವ ಕಾರಂತ್ ಪ್ರಶಸ್ತಿ 2020 ನೀಡಿ ಗೌರವಿಸಲು ತೀರ್ಮಾನಿಸಲಾಗಿದೆ.
ಕಲ್ಕೂರ ಪ್ರತಿಷ್ಠಾನ ಮಂಗಳೂರು ಹಾಗೂ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಅ.10ರಂದು ಮಂಗಳೂರಿನಲ್ಲಿ ಜರಗುವ ಕಾರಂತರ ಹುಟ್ಟುಹಬ್ಬದ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಹಿರಿಯ ಸಾಹಿತಿ, ಬಂಟ್ವಾಳ ತಾಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಮಹಾಬಲೇಶ್ವರ ಭಟ್ ಮಂಚಿ ಅವರಿಗೆ ಪ್ರಧಾನ ಮಾಡಲಾಗುವುದು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಸ್ ಪ್ರದೀಪ್‌ಕುಮಾರ್ ಕಲ್ಕೂರ ತಿಳಿಸಿದ್ದಾರೆ.
ಮಹಾಬಲೇಶ್ವರ ಭಟ್ ಅವರು ಕಾರಂತರ ನಿಕಟವರ್ತಿಗಳಾಗಿದ್ದರು. ಇವರ ಸ್ವಗೃಹದಲ್ಲೇ ಹಲವಾರು ಬಾರಿ ಕಾರಂತರು ಉಳಿದುಕೊಂಡು ಕಾದಂಬರಿ ಬರೆಯುತ್ತಿದ್ದರು. 'ಚೋಮನ ದುಡಿ' ಚಿತ್ರದ ಚಿತ್ರೀಕರಣ ಇವರ ಮನೆಯ ಪರಿಸದಲ್ಲೇ ನಡೆದಿತ್ತು.
ಮಹಾಬಲೇಶ್ವರ ಭಟ್ ಅವರು ತುಳು ಭಾಷಾಜ್ಞಾನಿಗಳಾಗಿದ್ದು, ಕಾರಂತರಿಗೆ ತುಳು ಭಾಷೆಯ ಬಗ್ಗೆ ಅಗತ್ಯದ ಮಾಹಿತಿ ನೀಡುತ್ತಿದ್ದರು. ಹೆಸರು, ಪ್ರಚಾರ, ಪ್ರಶಸ್ತಿ, ಪ್ರತಿಷ್ಠೆಗಳಿಂದ ದೂರ ಉಳಿದ ಇವರ ನಿಸ್ವಾರ್ಥ ಸಾಹಿತ್ಯ ಸೇವೆಯನ್ನು ಹಲವಾರು ಗಣ್ಯ ಸಾಹಿತಿಗಳು ಗುರುತಿಸಿ ಶ್ಲಾಘಿಸಿರುತ್ತಾರೆ.