ಮಂಗಳೂರು : ಇನ್ಮುಂದೆ ಕಂಟೇನ್ಮೆಂಟ್ ಝೋನ್ ಇರುವುದಿಲ್ಲ, ಕೇವಲ ಹೋಂ ಕ್ವಾರಂಟೈನ್ ಇರುವ ಮನೆಯನ್ನು ಮಾತ್ರ 14 ದಿನಗಳ ಕಾಲ ಸೀಲ್ ಡೌನ್ ಮಾಡಲಾಗುತ್ತದೆ. ಈ ವೇಳೆ ಅಗತ್ಯ ವಸ್ತುಗಳ ಪೂರೈಕೆಗೆ ವ್ಯವಸ್ಥೆ ಮಾಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಕೋವಿಡ್ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಸಭೆ ನಡೆಸಿ ಮಾತನಾಡಿ, ಸೋಂಕಿನ ಲಕ್ಷಣ ಇದ್ದವರಿಗೆ ಮಾತ್ರ ತಪಾಸಣೆ ಮಾಡಿದರೆ ಸಾಕು, ರೋಗ ಲಕ್ಷಣ ಇಲ್ಲದವರಿಗೆ ತಪಾಸಣೆಯ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಆದ್ದರಿಂದ ಹೋಂ ಕ್ವಾರೆಂಟೈನ್ಗಳ ಅಗತ್ಯವಿದೆ ಎಂದು ಹೇಳಿದರು.
ಮಹಾರಾಷ್ಟ್ರದಿಂದ ಬರುವವರನ್ನು 7 ದಿನಗಳ ಕಾಲ ಸಾಂಸ್ಥಿಕ ಕ್ವಾರೆಂಟೈನ್ಗೆ ಒಳಪಡಿಸಲಾಗುವುದು ಎಂಬ ಮಾರ್ಗಸೂಚಿ ಹೊರಡಿಸಲಾಗಿತ್ತು. ಆದರೆ ಅವರನ್ನು ಸಾಂಸ್ಥಿಕ ಕ್ವಾರೆಂಟೈನ್ನಲ್ಲಿ ಇರಿಸುವುದೋ ಅಥವಾ ಮನೆಯಲ್ಲಿಯೇ ಕ್ವಾರೆಂಟೈನ್ ಮಾಡುವುದೋ ಎಂಬುವುದರ ಬಗ್ಗೆ ಹಾಗೂ ತಪಾಸಣೆ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗವುದು ಎಂದರು.
ಕೊರೊನಾ ಸೋಂಕನ್ನು ಸಾಮಾಜಿಕ ಪಿಡುಗು ಎಂದು ಬಣ್ಣಿಸಲಾಗುತ್ತಿದೆ. ಸೋಂಕಿತರನ್ನು ಕಳಂಕಿತರಾಗಿ ನೋಡಲಾಗುತ್ತಿದೆ. ಇದನ್ನು ಜನರ ಮನಸ್ಸಿನಿಂದ ಹೋಗಲಾಡಿಸೋದು ಬಹುದೊಡ್ಡ ಸವಾಲಾಗಿದೆ. ಕರ್ನಾಟಕದಲ್ಲಿ ಬೇರೆ ರಾಜ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ಸೋಂಕು ಇದೆ. ಈಗ ಇರುವ ಸೋಂಕಿತರಲ್ಲಿ ಶೇ. 98 ರಷ್ಟು ಮಹಾರಾಷ್ಟ್ರದಿಂದ ಬಂದವರು. ಜನರ ಜೀವ ಉಳಿಸುವ ಕೆಲಸವನ್ನು ಕಳೆದ ಮೂರು ತಿಂಗಳುಗಳಿಂದ ಮಾಡಲಾಗುತ್ತಿದೆ. ಈಗ ಜೀವನ ಉಳಿಸುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.