ಮಂಗಳೂರು: ಎರಡನೇ ಅಲೆಯ ಕೊರೊನಾ ಸೋಂಕಿನಿಂದ ಜನರಿಗೆ ಸಂಕಷ್ಟ ಎದುರಾಗಿದ್ದು, ಸೋಂಕಿತರ ನೆರವಿಗೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಎರಡು ಉಚಿತ ಆ್ಯಂಬುಲೆನ್ಸ್ ಸೇವೆಯನ್ನು ಆರಂಭಿಸಿದೆ.
ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯ ಮುಂಭಾಗ ಯುವ ಕಾಂಗ್ರೆಸ್ ಮುಖಂಡ ನಲಪಾಡ್ ಹ್ಯಾರಿಸ್ ಆ್ಯಂಬುಲೆನ್ಸ್ ಸೇವೆಗೆ ಚಾಲನೆ ನೀಡಿದರು. ಬಳಿಕ ನಲಪಾಡ್ ಮಾತನಾಡಿ, ದ.ಕ.ಜಿಲ್ಲೆಯಲ್ಲಿ ಇತ್ತೀಚಿಗೆ ಆ್ಯಂಬುಲೆನ್ಸ್ ಸೇವೆಗೆ ವಿಪರೀತ ವೆಚ್ಚ ಹೇಳಲಾಗುತ್ತಿದ್ದು, ಬಡ ಸೋಂಕಿತರು ಇಷ್ಟೊಂದು ಹಣ ಖರ್ಚು ಭರಿಸಲು ಸಾಧ್ಯವಾಗದೇ ಸಂಕಷ್ಟಕ್ಕೊಳಗಾಗಿದ್ದಾರೆ. ಈ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು 'ಕಾಂಗ್ರೆಸ್ ಕೇರ್ಸ್' ಮೂಲಕ ಕಾಂಗ್ರೆಸ್ನಿಂದಲೇ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಈಗಾಗಲೇ 10 ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಆ ಬಳಿಕ ಇದೀಗ ಮಂಗಳೂರಿನಲ್ಲಿ ಎರಡು ಆ್ಯಂಬುಲೆನ್ಸ್ ಅನ್ನು ನೀಡಲಾಗುತ್ತಿದೆ ಎಂದು ಹೇಳಿದರು.
ಈ ಕೆಲಸವನ್ನು ನಿಜವಾಗಿಯೂ ಆಡಳಿತ ನಡೆಸುತ್ತಿರುವ ಸರ್ಕಾರ ಮಾಡಬೇಕಿತ್ತು. ಆದರೆ, ಸರಕಾರ ಎಡವಿರೋದನ್ನು ನೋಡಿ ನಾವು ಈ ಕೆಲಸ ಮಾಡುತ್ತಿದ್ದೇವೆ. ಬಿಜೆಪಿಗರು ದುಡ್ಡು ಮಾಡೋದು, ಕಮಿಷನ್ ಹೊಡೆಯೋದಕ್ಕೆ ಮಾತ್ರ ಸೀಮಿತವಾಗಿದೆ. ಆದ್ದರಿಂದ ಈ ಭಾಗದ ಬಡವರ ಉಪಯೋಗಕ್ಕಾಗಿ ಈ ಆ್ಯಂಬುಲೆನ್ಸ್ ಅನ್ನು ನೀಡಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ರಮಾನಾಥ್ ರೈ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮಾಜಿ ಎಂಎಲ್ ಸಿ ಐವನ್ ಡಿಸೋಜಾ, ಮಾಜಿ ಶಾಸಕ ಮೊಯಿದ್ದೀನ್ ಬಾವ, ಸುಹೈಲ್ ಕಂದಕ್, ಯುಪಿ ಇಬ್ರಾಹಿಂ ಮತ್ತಿತರರು ಉಪಸ್ಥಿತರಿದ್ದರು.