ಮಂಗಳೂರು : ಇಂಧನ ಬೆಲೆ ಏರಿಕೆ ಖಂಡಿಸಿ ದ.ಕ.ಜಿಲ್ಲಾ ಕಾಂಗ್ರೆಸ್ನಿಂದ ಆಟೋ ರಿಕ್ಷಾಗೆ ಹಗ್ಗ ಕಟ್ಟಿ ಎಳೆದು, ಎತ್ತಿನ ಬಂಡಿಯಲ್ಲಿ ಸಾಗುವ ಮೂಲಕ ವಿಶಿಷ್ಟವಾಗಿ ಪ್ರತಿಭಟನೆ ನಡೆಯಿತು.
ನಗರದ ಮಿನಿ ವಿಧಾನಸೌಧದ ಮುಂಭಾಗದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ, ಕ್ಲಾಕ್ ಟವರ್, ಪುರಭವನ, ಲೇಡಿಗೋಷನ್ ಆಸ್ಪತ್ರೆ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಸಾಗಿ ಬಂತು.
ಪ್ರತಿಭಟನಾ ಸಭೆ ಉದ್ದೇಶಿಸಿ ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ರಾಜ ವ್ಯಾಪಾರಿಯಾದಲ್ಲಿ ಪ್ರಜೆಗಳು ಬಿಕರಿಯಾಗುತ್ತಾರೆ. ಇಂದು ಭಾರತದ ಸ್ಥಿತಿ ಇದೇ ರೀತಿ ಆಗಿದೆ. ಮೋದಿ ಸರ್ಕಾರ ದೇಶದಲ್ಲಿ ಅಘೋಷಿತ ಸರ್ವಾಧಿಕಾರ ಮಾಡುತ್ತಿದೆ. ಬಿಜೆಪಿಗರು ಮಾತು ಮಾತಿಗೆ ಇಂದಿರಾಗಾಂಧಿ ಕಾಲದಲ್ಲಿ ತುರ್ತು ಪರಿಸ್ಥಿತಿ ಹೇರಲಾಯಿತು ಎಂದು ಹೇಳುತ್ತಾರೆ.
ಆದರೆ, ಆ ಕಾಲದಲ್ಲಿ ಬಡವರಿಗೆ ಅನೇಕ ಲಾಭಗಳಾಯಿತು. ಇಂದಿರಾ ಗಾಂಧಿಯವರ ಯೋಜನೆಗಳು ಯಥಾವತ್ತಾಗಿ ದ.ಕ.ಜಿಲ್ಲೆಯಲ್ಲಿ ಜಾರಿಯಾಗಿ ಅತೀ ಹೆಚ್ಚು ಜನರು ಲಾಭ ಪಡೆದರು. ಇದೀಗ ಬಹಳಷ್ಟು ಸಮುದಾಯದವರು ತಮ್ಮನ್ನು 2ಎ ಕೆಟಗರಿಗೆ ಸೇರಿಸಬೇಕೆಂದು ಹೋರಾಟ ಮಾಡುತ್ತಿದ್ದಾರೆ. ಕಾಂಗ್ರೆಸ್ ಕಾಲದಲ್ಲಿ ಅತೀ ಹೆಚ್ಚು ಸಮುದಾಯಗಳನ್ನು 2ಎ ಗೆ ಸೇರಿಸಲಾಗಿದೆ. ಆದ್ದರಿಂದ ಅವರ ಮೇಲೆ ಕಾಂಗ್ರೆಸ್ ಋಣ ಭಾರವಿದೆ. ಅದನ್ನು ತೀರಿಸಲು ಅವರು ಕಾಂಗ್ರೆಸ್ ಅನ್ನು ಮತ್ತೆ ಗೆಲ್ಲಿಸಬೇಕಿದೆ ಎಂದು ಹೇಳಿದರು.
ಇದನ್ನೂ ಓದಿ: ಡಿಕೆಶಿ ನೇತೃತ್ವದಲ್ಲಿ ಕೈ ಕಾರ್ಯಕರ್ತೆಯರ ಬೃಹತ್ ಪ್ರತಿಭಟನಾ ಮೆರವಣಿಗೆ
ಪೆಟ್ರೋಲ್, ಡೀಸೆಲ್ ದರ ಹೆಚ್ಚಾಗುತ್ತಲೇ ಇದೆ. ಪರಿಣಾಮ ದಿನ ಬಳಕೆಯ ವಸ್ತುಗಳ ಮೇಲೆಯೂ ಬೀರುತ್ತಿದೆ. ಆದರೆ, ಬಿಜೆಪಿಗರು ಅದು ಹಿಂದಿನ ಸರ್ಕಾರದ ತಪ್ಪು ನೀತಿಯಿಂದಾಗಿ ಆಗಿರುವುದು ಎಂದು ಹೇಳಿಕೊಂಡು ಬರುತ್ತಿದ್ದಾರೆ. ಹೌದು, ಹಿಂದಿನ ಸರ್ಕಾರದ ತಪ್ಪು ನೀತಿಯಿಂದಲೇ ಇದು ಆಗಿರುವುದು. ಈ ಹಿಂದಿನ ಅವಧಿಯಲ್ಲಿ ಆಡಳಿತ ನಡೆಸಿದ ಬಿಜೆಪಿಯ ತಪ್ಪು ನೀತಿಯಿಂದಲೇ ಆಗಿರುವುದು ಎಂದರು.
ಶಾಸಕ ಯು.ಟಿ.ಖಾದರ್, ಮಾಜಿ ಸಚಿವೆ ಶಕುಂತಲಾ ಶೆಟ್ಟಿ, ಕಾಂಗ್ರೆಸ್ ದ.ಕ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ದ.ಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ, ದ.ಕ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೊ ಮತ್ತಿತರರು ಉಪಸ್ಥಿತರಿದ್ದರು.