ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ನೇತ್ರಾವತಿ ಸ್ನಾನ ಘಟ್ಟ ಬಳಿಯಿಂದ ಕಲ್ಲೇರಿವರೆಗೆ ಸುಮಾರು 15 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಚತುಷ್ಪಥ ರಸ್ತೆಯನ್ನು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಫೆ.7ರಂದು ಬೆಳಗ್ಗೆ 10.30ಕ್ಕೆ ಲೋಕಾರ್ಪಣೆಗೊಳಿಸಲಿದ್ದಾರೆ.
ಇದು ಸುಮಾರು 2 ಕಿ.ಮೀ. ದೂರದ ಚತುಷ್ಪಥ ರಸ್ತೆಯಾಗಿದ್ದು, ಲೋಕೋಪಯೋಗಿ ಇಲಾಖೆ ಸಚಿವರಾಗಿದ್ದ ಹಚ್.ಡಿ. ರೇವಣ್ಣ ಅವರ ಅವಧಿಯಲ್ಲಿ 2019ರ ಧರ್ಮಸ್ಥಳ ಭಗವಾನ್ ಬಾಹುಬಲಿ ಮಸ್ತಕಾಭಿಷೇಕ ಸಂದರ್ಭ ಶಿಲಾನ್ಯಾಸ ನೆರವೇರಿಸಲಾಗಿತ್ತು. 7.50ಯಂತೆ ಎರಡು ಬದಿ ಒಟ್ಟು 15 ಮೀಟರ್ ನಷ್ಟು ರಸ್ತೆ ಅಗಲವಾಗಿದೆ. ಎರಡು ರಸ್ತೆಗಳ ಮಧ್ಯೆ 2.50 ಮೀ. ಗಾರ್ಡನಿಂಗ್ಗಾಗಿ ಡಿವೈಡರ್ ನಿರ್ಮಿಸಲಾಗಿದೆ. ರಸ್ತೆಯ ಎರಡೂ ಬದಿಗಳಲ್ಲಿ ಚರಂಡಿ ನಿರ್ಮಿಸಿ, ಭಕ್ತರು ನಡೆದುಕೊಂಡು ಹೋಗಲು ಸಹಾಯವಾಗುವಂತೆ ಫುಟ್ಪಾಥ್ ನಿರ್ಮಿಸಲಾಗಿದೆ.
ಗಣ್ಯರ ಉಪಸ್ಥಿತಿ:
ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಅವರು ಫೆ.7ರಂದು ಬೆಳಗ್ಗೆ 10.30ಕ್ಕೆ ಲೋಕಾರ್ಪಣೆಗೊಳಿಸಲಿದ್ದು, ನಾಡಿನ ಗಣ್ಯರು ಭಾಗವಹಿಸಲಿದ್ದಾರೆ. ಸಂಸದ ನಳೀನ್ ಕುಮಾರ್ ಕಟೀಲ್, ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಚಿವ ಅಂಗಾರ, ಶಾಸಕ ಹರೀಶ್ ಪೂಂಜ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ.
ಪ್ರವಾಸಿ ಬಂಗಲೆಗೆ ಶಿಲಾನ್ಯಾಸ:
ಬೆಳ್ತಂಗಡಿ ನಗರದಲ್ಲಿರುವ ಪ್ರವಾಸಿ ಬಂಗಲೆ(ಐಬಿ)ಗೆ ನೂತನ ಕಟ್ಟಡಕ್ಕಾಗಿ 4.95 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಫೆ.7 ರಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಬ್ರಿಟಿಷರ ಕಾಲದ ಹಳೆಯ ಪ್ರವಾಸಿ ಬಂಗಲೆ ಹೊಂದಿದ್ದು, ಅಲ್ಲಿಯೇ ಸುಸಜ್ಜಿತವಾದ ಭವ್ಯ ಪ್ರವಾಸಿ ಬಂಗಲೆ ನಿರ್ಮಾಣವಾಗಲಿದೆ.