ಬೆಳ್ತಂಗಡಿ: ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ತಾಲೂಕಿನ ಅನ್ನಾರು ಸೇತುವೆ, ಬೆಳ್ತಂಗಡಿ ಪರಿವೀಕ್ಷಣಾ ಮಂದಿರ ಹಾಗೂ ಕುತ್ಲೂರು ಸಮೀಪದ ಕುಕ್ಕುಜೆ ಸೇತುವೆಗಳಿಗೆ ಶಿಲಾನ್ಯಾಸ ನೆರವೇರಿಸಿದರು.
ಈ ವೇಳೆ ಮಾತನಾಡಿದ ಅವರು, 2020-21ನೇ ಸಾಲಿನಲ್ಲಿ ಮಳೆ ಹಾಗೂ ನೆರೆ ಹಾವಳಿಯಿಂದ 35,000 ಕೋಟಿ ರೂ. ಮೌಲ್ಯದ ಕೃಷಿ ಹಾಗೂ ಆಸ್ತಿಪಾಸ್ತಿ ಹಾನಿಯಾಗಿದೆ. ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ 7000 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ರಸ್ತೆ ಹಾಗೂ ಕಟ್ಟಡಗಳಿಗೆ ಹಾನಿಯಾಗಿದೆ. ಕೇಂದ್ರ ಸರ್ಕಾರಕ್ಕೆ 18,000 ಕೋಟಿ ರೂ. ಪರಿಹಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಈಗಾಗಲೇ 6000 ಕೋಟಿ ರೂ. ಬಿಡುಗಡೆ ಆಗಿದೆ ಎಂದರು.
ಪುಂಜಾಲಕಟ್ಟೆಯಿಂದ - ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಬಗ್ಗೆ ಈಗಾಗಲೇ ಸಮೀಕ್ಷೆ ಮಾಡಲಾಗಿದೆ. ಶಾಸಕರು ಈ ಬಗ್ಗೆ ಒತ್ತಡ ಹಾಕುತ್ತಿದ್ದಾರೆ. ಈ ಭಾಗದ ಶಾಸಕರುಗಳೊಂದಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿಯವರನ್ನು ಭೇಟಿಯಾಗಿ, ರಸ್ತೆ ಅಭಿವೃದ್ಧಿ ಬಗ್ಗೆ ಮನವರಿಕೆ ಮಾಡಲಾಗುವುದು ಎಂದು ಹೇಳಿದರು.
ನಂತರ ಬೆಳ್ತಂಗಡಿ ಪರಿವೀಕ್ಷಣಾ ಮಂದಿರದ ಶಿಲಾನ್ಯಾಸ ನೆರವೇರಿಸಿ, ಮಂಜುನಾಥ ಕಲಾಭವನದಲ್ಲಿ ಅಭಿನಂದನಾ ಸಭೆಯಲ್ಲಿ ಭಾಗವಹಿಸಿ, ನಂತರ ಕುತ್ಲೂರು ಕುಕ್ಕುಜೆ ಸೇತುವೆಗೆ ಶಿಲಾನ್ಯಾಸ ನೆರವೇರಿಸಿದರು.