ಮಂಗಳೂರು : ತುಳು ಭಾಷೆಯನ್ನು ರಾಜ್ಯ ಭಾಷೆಯಾಗಿ ಅಂಗೀಕರಿಸುವ ನಿಟ್ಟಿನಲ್ಲಿ ತಜ್ಞರ ಅಭಿಪ್ರಾಯ ಕ್ರೂಢೀಕರಿಸಿ ಸೂಕ್ತ ನಿರ್ಧಾರ ಪ್ರಕಟಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಿಗೆ ಭರವಸೆ ನೀಡಿದ್ದಾರೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ.ಕತ್ತಲ್‌ಸಾರ್ ಅವರು ಇತ್ತೀಚಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಸಲ್ಲಿಸಿದ ಮನವಿಗೆ ಅವರು ಈ ಭರವಸೆ ನೀಡಿದ್ದಾರೆ. ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರನ್ನು ಭೇಟಿ ಮಾಡಿ, ತುಳುನಾಡಿನ ಜನರ ಬೇಡಿಕೆಯನ್ನು ಮನದಟ್ಟು ಮಾಡಲಾಗಿದೆ. ಆಶಾದಾಯಕ ಪ್ರತಿಕ್ರಿಯೆ ಸಿಕ್ಕಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಶಿಕ್ಷಣ ಸಚಿವರನ್ನು ಭೇಟಿ ಮಾಡಿ, ಅತಿಥಿ ಶಿಕ್ಷಕರ ಸಮಸ್ಯೆ ಬಗ್ಗೆ ಅಕಾಡೆಮಿ ಅಧ್ಯಕ್ಷರು ಮಾಹಿತಿ ನೀಡಿದ್ದು, ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್, ಕೇಂದ್ರದಿಂದ ಜಾರಿಯಾಗಲಿರುವ ಹೊಸ ಶಿಕ್ಷಣ ನೀತಿಯಿಂದಾಗಿ ಪ್ರಾದೇಶಿಕ ಭಾಷೆಗಳಿಗೆ ವಿಶೇಷ ಆದ್ಯತೆ ಸಿಗಲಿದೆ.
ಇದರಿಂದ ತುಳು ಭಾಷೆಯನ್ನು ಕಲಿಸುತ್ತಿರುವ ಅತಿಥಿ ಶಿಕ್ಷಕರಿಗೂ ನ್ಯಾಯ ಸಿಗಲಿದೆ’ ಎಂದು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಿಗೆ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಅಕಾಡೆಮಿಯ ಸದಸ್ಯೆ ಕಾಂತಿ ಶೆಟ್ಟಿ ಜೊತೆಗಿದ್ದರು.