ಬೆಳ್ತಂಗಡಿ (ದಕ್ಷಿಣ ಕನ್ನಡ): ಮೃತಪಟ್ಟಿದ್ದಾನೆ ಎಂದು ತಿಳಿದು ಅಂತ್ಯಸಂಸ್ಕಾರ ನೆರವೇರಿಸಿ, ಉತ್ತರ ಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಕುಟುಂಬಸ್ಥರ ಮುಂದೆ ಆ ವ್ಯಕ್ತಿ ಪ್ರತ್ಯಕ್ಷನಾಗಿ ಅಚ್ಚರಿ ಮೂಡಿಸಿದ್ದಾನೆ.
ಇಲ್ಲಿನ ಗರ್ಡಾಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸ್ಥಳೀಯ ನಿವಾಸಿ ಶ್ರೀನಿವಾಸ ದೇವಾಡಿಗ (60) ಜ.26 ರಂದು ನಾಪತ್ತೆಯಾಗಿದ್ದರು. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅವರ ಮಕ್ಕಳು ನಾಪತ್ತೆ ದೂರು ಸಲ್ಲಿಸಿದ್ದರು. ಒಂದು ವಾರದ ಬಳಿಕ ಕಳೆದ ಫೆ.3 ರಂದು ಓಡಿಲ್ನಾಳ ಗ್ರಾಮದ ಕುಲ್ಲುಂಜ ಕೆರೆಯಲ್ಲಿ ಅಪರಿಚಿತ ಶವವೊಂದು ತೇಲುತ್ತಿರುವುದು ಪತ್ತೆಯಾಗಿತ್ತು. ಇದು ನಾಪತ್ತೆಯಾದ ಶ್ರೀನಿವಾಸರದ್ದಿರಬೇಕು ಎಂಬ ಸುದ್ದಿ ಹರಡಿತ್ತು. ಶವ ಕೊಳೆತ ಹಿನ್ನೆಲೆಯಲ್ಲಿ ಸರಿಯಾಗಿ ಗುರುತು ಪತ್ತೆ ಹಚ್ಚಲು ಆಗಿರಲಿಲ್ಲ. ಆದ್ದರಿಂದ ಇದು ಶ್ರೀನಿವಾಸ ಅವರದ್ದೇ ಶವ ಇರಬಹುದೆಂದು ಕುಟುಂಬಸ್ಥರು ಅಂತ್ಯಸಂಸ್ಕಾರ ನೆರವೇರಿಸಿದ್ದರು. ಇದೀಗ ಉತ್ತರ ಕ್ರಿಯೆಗೆ ಕೂಡ ಕುಟುಂಬಸ್ಥರು ಸಿದ್ಧತೆ ನಡೆಸಿದ್ದರು. ಆದರೆ 10 ದಿನಗಳ ಬಳಿಕ ಶ್ರೀನಿವಾಸ ಜೀವಂತವಾಗಿ ಊರಿಗೆ ಮರಳಿದ್ದು, ಎಲ್ಲರಿಗೂ ಆಶ್ಚರ್ಯ ಮೂಡಿಸಿದೆ.
ಕುಡಿತದ ಚಟಕ್ಕೆ ದಾಸರಾಗಿರುವ ಶ್ರೀನಿವಾಸ ಅವರು ಸಹೋದರನ ಮನೆಯಲ್ಲಿ ನೆಲೆಸಿದ್ದರು. ಹಲವು ಬಾರಿ ಮನೆಯಿಂದ ಹೊರಹೋಗುತ್ತಿದ್ದ ಅವರು ವಾರಗಳ ಕಾಲ ಮನೆಗೆ ಬರದೇ ಎಲ್ಲೆಂದರಲ್ಲಿ ತಿರುಗಾಡುತ್ತಾ, ಸಿಕ್ಕ ಸಿಕ್ಕಲ್ಲಿ ಮಲಗುತ್ತಿದ್ದರು. ಮತ್ತೆ ಯಾವಾಗೋ ಮನೆಗೆ ಮರಳುತ್ತಿದ್ದರು. ಹಿಂದೆ ಹಲವು ಬಾರಿ ಹೀಗೆ ಹೋದ ಬಳಿಕ ಮನೆಗೆ ಮರಳಿದ್ದರು. ಆದರೆ ಈ ಬಾರಿ ಕೆರೆಯಲ್ಲಿ ದೇಹ ಸಿಕ್ಕಾಗ ಮನೆಯವರು ಮತ್ತು ಊರವರೆಲ್ಲರೂ, ಅದೇ ವ್ಯಕ್ತಿ ಆಕಸ್ಮಿಕವಾಗಿ ಕೆರೆಗೆ ಬಿದ್ದು ಪ್ರಾಣ ಬಿಟ್ಟಿರಬಹುದೆಂದು ಅಂದುಕೊಂಡಿದ್ದರು.
ಹಾಗಿದ್ರೆ ಅಂದು ಪತ್ತೆಯಾದ ಮೃತದೇಹ ಯಾರದ್ದು ಎಂಬ ಬಗ್ಗೆ ಪೊಲೀಸರಿಗೆ ಹೊಸ ತಲೆನೋವು ಪ್ರಾರಂಭವಾಗಿದೆ.