ಮಂಗಳೂರು : ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಹೊರಡಿಸಿದ್ದ ಹಳೇ ನೋಟಿಫಿಕೇಶನ್ ಅನ್ನು ತಿದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದ ಕಿಡಿಗೇಡಿಗಳನ್ನು ಬಂಧಿಸಿ, ಸೂಕ್ತ ಕ್ರಮ ಜರುಗಿಸುವಂತೆ ಡಿಸಿ ಕಚೇರಿ ಆದೇಶಿಸಿದೆ.
ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ನಗರಾದ್ಯಂತ ಎಲ್ಲಾ ಶೈಕ್ಷಣಿಕ ಸಂಸ್ಥೆಗಳಿಗೆ ಇಂದು ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿಯವರ ಕಚೇರಿಯ ನಕಲಿ ಆದೇಶವನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಗೇಡಿಗಳು ಸುಳ್ಳು ಸುದ್ದಿ ಹಬ್ಬಿಸಿದ್ದರು. ಈ ಲೆಟರ್ ಹೆಡ್ ಅನ್ನು ಪರಿಶೀಲನೆ ನಡೆಸಿದಾಗ ಇದು ಡಿಸೆಂಬರ್ 20-21ರಂದು ಜಿಲ್ಲೆಯಾದ್ಯಂತ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡಲು ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಧಿಕಾರಿ ಕಚೇರಿಯಿಂದ ಹೊರಡಿಸಲಾಗಿರುವ ಆದೇಶ ಪತ್ರವನ್ನು ತಿದ್ದಿರುವುದು ಎಂದು ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಲೆಟರ್ ಹೆಡ್ ಹಾಗೂ ಜಿಲ್ಲಾಧಿಕಾರಿ ಸಹಿಯನ್ನು ದುರ್ಬಳಕೆ ಮಾಡಿದ ಆರೋಪದ ಮೇಲೆ ಕ್ರಮ ಕೈಗೊಳ್ಳುವಂತೆ ಮಾಹಿತಿ ತಂತ್ರಜ್ಞಾನ ಕಾಯಿದೆ ಹಾಗೂ ಐಪಿಸಿ ಕಾಯಿದೆಗಳಡಿಯಲ್ಲಿ ದೂರು ನೀಡಲಾಗಿದೆ.
ಅಲ್ಲದೆ ಈ ರೀತಿಯಲ್ಲಿ ಕೃತ್ಯವನ್ನೆಸಗಿದ ಕಿಡಿಗೇಡಿಗಳನ್ನು ಶೀಘ್ರ ಬಂಧಿಸಿ, ಅವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಜರುಗಿಸಲು ಜಿಲ್ಲಾಧಿಕಾರಿ ಕಚೇರಿಯಿಂದ ಪೊಲೀಸ್ ಇಲಾಖೆಗೆ ಆದೇಶ ನೀಡಲಾಗಿದೆ.