ಬಂಟ್ವಾಳ(ದಕ್ಷಿಣಕನ್ನಡ) : ಬಿ ಸಿ ರೋಡ್-ಸುರತ್ಕಲ್ನ ಚತುಷ್ಪಥ ರಸ್ತೆಯಲ್ಲಿ ಕಾಣಿಸುವ ಅತ್ಯಂತ ಅಪಾಯಕಾರಿ ಜಾಗ ಎಂದೇ ಹೇಳಲಾಗುವ ಬ್ರಹ್ಮರಕೂಟ್ಲು ಟೋಲ್ ಪ್ಲಾಜಾ ಸುತ್ತಮುತ್ತಲಿನ ಜಾಗದಲ್ಲಿ ಕಳೆದ ವರ್ಷ ಟವೇರಾ ಕಾರು ಮತ್ತು ಬುಲೆಟ್ ಟ್ಯಾಂಕರ್ ಮುಖಾಮುಖಿ ಡಿಕ್ಕಿಯಾಗಿ ನಾಲ್ವರನ್ನು ಬಲಿಪಡೆದುಕೊಂಡಿತ್ತು.
ಬಿ ಸಿ ರೋಡಿನ ತಲಪಾಡಿಯಿಂದ ಟೋಲ್ ಪ್ಲಾಜಾಕ್ಕಿಂತ ಸುಮಾರು ಅರ್ಧ ಕಿ.ಮೀ ಆಸುಪಾಸಿನ ರಸ್ತೆ ವಾಹನ ಚಾಲಕರನ್ನು ದಂಗುಬಡಿಸುವಂತೆ ರಚನೆಯಾಗಿದೆ. ಸಮರ್ಪಕವಾದ ಜಾಗದಲ್ಲಿ ಸೂಚನಾ ಫಲಕ ಇಲ್ಲದಿರುವುದು, ಇಕ್ಕಟ್ಟಿನ ರಸ್ತೆ ಪಕ್ಕದಲ್ಲೇ ಟೋಲ್ ಪ್ಲಾಜಾ ನಿರ್ಮಾಣವಾಗಿರುವುದು ಹಾಗೂ ಚತುಷ್ಪಥ ರಸ್ತೆಯನ್ನು ಸಂಪೂರ್ಣಗೊಳಿಸದೇ ಇರುವುದು ಇದಕ್ಕೆ ಕಾರಣ.
ಬಿ ಸಿ ರೋಡ್ ತಲಪಾಡಿಯಿಂದ ತುಂಬೆ ರಾಮಲ್ ಕಟ್ಟೆವರೆಗೆ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ನಿರೀಕ್ಷಿತ ರೀತಿ ನಡೆಯದ ಕಾರಣ ಅಪಘಾತಕ್ಕೆ ಆಹ್ವಾನ ನೀಡುತ್ತಿದೆ ಎಂದು ಈ ರಸ್ತೆ ರಚನೆಯಾಗುವ ಹೊತ್ತಿನಲ್ಲೇ ಸ್ಥಳೀಯರು ಹೇಳುತ್ತಿದ್ದರು. ಅದಕ್ಕೆ ಸಾಕ್ಷಿಯಾಗಿ ರಾಮಲ್ ಕಟ್ಟೆ, ತಲಪಾಡಿ ಮೆಸ್ಕಾಂ ಸ್ಟೇಷನ್ ಎದುರು ಅಪಘಾತಗಳು ಸಂಭವಿಸಿ ಮರಣವೂ ಸಂಭವಿಸಿದ್ದವು. ಚತುಷ್ಪಥ ರಸ್ತೆಯಾದ ಕಾರಣ ವೇಗದಲ್ಲಿ ಸಾಗುವ ವಾಹನಗಳಿಗೆ ಸರಿಯಾದ ಮಾರ್ಗಸೂಚಿ ಫಲಕವೂ ಇಲ್ಲಿ ಕಾಣಿಸುತ್ತಿಲ್ಲ. ಇಡೀ ಸಮಸ್ಯೆಗೆ ಕಾರಣವಾಗಿರುವುದು ಟೋಲ್ ಪ್ಲಾಜಾ ಮತ್ತು ಅದರ ಸನಿಹವೇ ಇರುವ ಅಗಲಗೊಳ್ಳದ ರಸ್ತೆ.
ಬ್ರಹ್ಮಸನ್ನಿಗೆ ಸರಿಯಾಗಿ ಮೇಲ್ಭಾಗದಲ್ಲಿರುವ ಈ ಮಿನಿಸೇತುವೆಯಲ್ಲಿ ಸಂಚರಿಸುವುದು ಅಪಾಯವನ್ನು ಆಹ್ವಾನಿಸಿದಂತೆ. ಈಗ ಕೊರೊನಾ ಹಿನ್ನೆಲೆ ವಾಹನಗಳ ಓಡಾಟ ಕಡಿಮೆ. ಇಲ್ಲದೇ ಇದ್ದರೆ, ಬ್ರಹ್ಮರಕೂಟ್ಲು ಟೋಲ್ ಪ್ಲಾಜಾದಲ್ಲಿ ವಾಹನಗಳನ್ನು ತಡೆದು ಸುಂಕ ವಸೂಲಿ ಮಾಡುವ ಪ್ರಕ್ರಿಯೆ ನಡೆಯುತ್ತಿರುವ ವೇಳೆ ವಾಹನಗಳ ಸಾಲು ಬೆಳೆಯಲಾರಂಭಿಸುತ್ತದೆ.
ಬಿ ಸಿ ರೋಡಿನಿಂದ ಟೋಲ್ ಪ್ಲಾಜಾದ ಕಡೆಗೆ ಬರುವ ಸಂದರ್ಭ ವಾಹನಗಳು ನೇರವಾಗಿ ಟೋಲ್ ಕಡೆಗೆ ಬರುತ್ತಾರೆ. ಆದರೆ, ಚತುಷ್ಪಥ ರಸ್ತೆ ದಿಢೀರನೆ ಕಡಿತಗೊಂಡು ಎದುರಿನಿಂದ ವಾಹನಗಳು ಬರುವಾಗ ಚಾಲಕ ಗಲಿಬಿಲಿಗೊಳ್ಳುತ್ತಾನೆ. ಅದೇ ರೀತಿ ಮಂಗಳೂರಿನಿಂದ ಬರುವ ವಾಹನಗಳು ಟೋಲ್ ಪಾವತಿಸಿ ಬಿ ಸಿ ರೋಡ್ ಕಡೆ ಸಂಚರಿಸುವ ಸಂದರ್ಭ ಬಲಕ್ಕೆ ಚಲಿಸಬೇಕಾಗುತ್ತದೆ. ಆ ಸಂದರ್ಭ ಕೆಲವೊಮ್ಮೆ ಓವರ್ ಟೇಕ್ ಮಾಡುವ ಭರದಲ್ಲಿ ಎದುರಿನಿಂದ ವಾಹನಗಳು ಬರುವುದನ್ನು ಗಮನಿಸುವುದಿಲ್ಲ ಹಾಗಾಗಿ ಈ ರಸ್ತೆ ಅಪಾಯವನ್ನು ಕಟ್ಟಿಟ್ಟ ಬುತ್ತಿ.