ಪುತ್ತೂರು: ವೈದ್ಯರ ಮೇಲೆ ನಡೆಯುತ್ತಿರುವ ಹಲ್ಲೆ ಪ್ರಕರಣಗಳನ್ನು ತಡೆಯಲು, ವೈದ್ಯರು ಮತ್ತು ಸಾರ್ವಜನಿಕರ ನಡುವೆ ನಂಬಿಕೆ, ವಿಶ್ವಾಸ ಬೆಳೆಸಲು ಬೆಂಗಳೂರಿನ ಮಣಿಪಾಲ ಆಸ್ಪತ್ರೆಯ ವೈದ್ಯರಿಬ್ಬರು ಬೆಂಗಳೂರಿನಿಂದ ಮಂಗಳೂರಿನ ತನಕ ಸೈಕಲ್ ಜಾಥಾ ನಡೆಸುತ್ತಿದ್ದು, ಮಂಗಳವಾರ ಪುತ್ತೂರಿಗೆ ಆಗಮಿಸಿದ್ದಾರೆ.
ಬೆಂಗಳೂರಿನ ಮಣಿಪಾಲ ಆಸ್ಪತ್ರೆಯ ಐಸಿಯು ತಜ್ಞ ವೈದ್ಯರಾದ ಡಾ. ಜಸ್ಟೀನ್ ಗೋಪಾಲ್‌ದಾಸ್ ಮತ್ತು ಡಾ. ನಿಖಿಲ್ ನಾರಾಯಣ ಸ್ವಾಮಿ ಅವರು ವೈದ್ಯರ ಮತ್ತು ಸಾರ್ವಜನಿಕರ ನಡುವೆ ಇರುವ ಅಪನಂಬಿಕೆ ತಡೆಯುವ ನಿಟ್ಟಿನಲ್ಲಿ ಮತ್ತು ಪರಸ್ಪರ ವಿಶ್ವಾಸ ಬೆಳೆಸುವ ನಿಟ್ಟಿನಲ್ಲಿ ಸೈಕಲ್ ಜಾಥಾ ನಡೆಸುತ್ತಿದ್ದಾರೆ. ಬೆಂಗಳೂರಿನ ಐಎಂಎ ಹಾಲ್ ಬಳಿಯಿಂದ ಭಾನುವಾರ ಬೆಳಗ್ಗೆ ಎರಡು ಸೈಕಲ್‌ಗಳಲ್ಲಿ ಹೊರಟಿರುವ ಡಾ. ಜಸ್ಟೀನ್ ಗೋಪಾಲ್‌ದಾಸ್ ಮತ್ತು ಡಾ. ನಿಖಿಲ್ ನಾರಾಯಣ ಸ್ವಾಮಿ ಅವರು ಸುಮಾರು 400 ಕಿ. ಮೀ ದೂರದ ಸಂಚಾರದಲ್ಲಿ ವೈದ್ಯ ಸೇವೆಯ ಅರಿವು ಮೂಡಿಸಲಿದ್ದಾರೆ.
ವೈದ್ಯರ ಮೇಲಿನ ಹಲ್ಲೆ ಸರಿಯಲ್ಲ:
ಮಂಗಳವಾರ ಮಧ್ಯಾಹ್ನ ಪುತ್ತೂರು ನಗರಕ್ಕೆ ಆಗಮಿಸಿದ ಅವರು ಪುತ್ತೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದರು. ಬದಲಾವಣೆಯ ಉದ್ದೇಶಕ್ಕಾಗಿ ಈ ಜಾಥಾ ಹಮ್ಮಿಕೊಂಡಿದ್ದೇವೆ ಎಂದ ಅವರು, ವೈದ್ಯರ ಮತ್ತು ಜನರ ನಡುವೆ ಉತ್ತಮ ಸಂವಹನದ ಅಗತ್ಯವಿದೆ. ಜನರು ವೈದ್ಯರಲ್ಲಿ ನಂಬಿಕೆ ಇಡಬೇಕು ಮತ್ತು ವೈದ್ಯರು ಜನರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಬೇಕು. ವೈದ್ಯರ ಮೇಲೆ ಹಲ್ಲೆ ನಡೆಸುವ ಪ್ರಕ್ರಿಯೆ ಸರಿಯಲ್ಲ.
ಸೈಕಲ್ ಜಾಥಾದ ಉದ್ದೇಶವೇನು?
ಶಾಂತಿಯುತವಾಗಿ ಪ್ರತಿಕ್ರಿಯೆ ನೀಡುವ ಮನೋಭಾವ ಬೆಳೆಯಬೇಕು. ಹಲವು ಸಂದರ್ಭದಲ್ಲಿ ಸಂವಹನದ ಕೊರತೆಯಿಂದಾಗಿ ಗೊಂದಲಗಳು ಸಂಭವಿಸುತ್ತದೆ. ರೋಗಿಗಳ ಕುಟುಂಬಸ್ಥರು ಗೊಂದಲ ಸೃಷ್ಟಿಸುವುದಕ್ಕಿಂತಲೂ ಮೂರನೇ ವ್ಯಕ್ತಿಗಳು, ಸಮಾಜಘಾತುಕ ಶಕ್ತಿಗಳು ಗೊಂದಲ ಸೃಷ್ಟಿಸಿ ವೈದ್ಯರ ಮೇಲೆ ಹಲ್ಲೆ ನಡೆಸುವ ಕೆಲಸಕ್ಕೆ ಮುಂದಾಗುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆಯಲ್ಲ.
ಬಹುತೇಕ ಹಲ್ಲೆ ಪ್ರಕರಣಗಳು ಹಣದ ವಿಚಾರದಿಂದ ಆಗುತ್ತಿಲ್ಲ. ಬದಲಿಗೆ ಜನರಲ್ಲಿನ ನಿರೀಕ್ಷೆಗಳ ಕಾರಣಗಳಿಂದ ನಡೆಯುತ್ತಿದೆ. ಹಿಂದಿನ ಚಿಕಿತ್ಸಾ ವಿಧಾನಕ್ಕೂ ಇಂದಿನ ಚಿಕಿತ್ಸಾ ವಿಧಾನಕ್ಕೂ ಬಹಳಷ್ಟು ವ್ಯತ್ಯಾಸಗಳಿವೆ. ಸಾರ್ವಜನಿಕರು ಇದನ್ನು ಅಥೈಸಿಕೊಳ್ಳಬೇಕಾಗಿದೆ. ವೈದ್ಯರಿಂದ ತಪ್ಪುಗಳು ಸಂಭವಿಸಿರುವುದು ಕಂಡು ಬಂದಲ್ಲಿ ಕಾನೂನು ರೀತಿಯಲ್ಲಿ ಪರಿಹರಿಸಿಕೊಳ್ಳಬೇಕಿದೆ. ಈ ಬಗ್ಗೆ ಅರಿವು ಮೂಡಿಸುವುದೇ ಸೈಕಲ್ ಜಾಥಾದ ಉದ್ದೇಶವಾಗಿದೆ ಎಂದರು.
ಇದನ್ನೂ ಓದಿ: ಹೆತ್ತ ಮಗುವನ್ನೇ ಮಾರಾಟ ಮಾಡಿದ ಆರೋಪ: ತಾಯಿ ಸೇರಿ ಇತರರ ವಿಚಾರಣೆ ಚುರುಕು
ಸುದ್ದಿಗೋಷ್ಠಿಯಲ್ಲಿ ಐಎಂಎ ಕರ್ನಾಟಕದ ಹೆರಾಸ್‌ಮೆಂಟ್ ಸೆಲ್‌ನ ಅಧ್ಯಕ್ಷ ಡಾ. ಗಣೇಶ್ ಪ್ರಸಾದ್ ಮುದ್ರಾಜೆ, ಪುತ್ತೂರಿನ ಆಸ್ಪತ್ರೆ ಅಸೋಸಿಯೇಷನ್ ಅಧ್ಯಕ್ಷ ಡಾ. ಶ್ರೀಪತಿ ರಾವ್, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಪುತ್ತೂರಿನ ವೈದ್ಯರಾದ ಡಾ. ಭಾಸ್ಕರ್, ಡಾ. ರವೀಂದ್ರ ಉಪಸ್ಥಿತರಿದ್ದರು.