ಮಂಗಳೂರು: ಸಿಎಂ ಯಡಿಯೂರಪ್ಪ ಇಂದು ನಗರಕ್ಕೆ ಆಗಮಿಸಿ ಕರ್ಫ್ಯೂ ಸಡಿಲಿಕೆ ಸೂಚನೆ ನೀಡಿದ ಹಿನ್ನೆಲೆ ಅಂಗಡಿ-ಮುಗ್ಗಟ್ಟುಗಳ ಮುಂದೆ ಅಗತ್ಯ ವಸ್ತುಗಳಿಗಾಗಿ ಜನರು ಮುಗಿಬಿದ್ದರು.
ಇಂದು ಮಧ್ಯಾಹ್ನ ಮೂರು ಗಂಟೆಯಿಂದ ಆರು ಗಂಟೆಯವರೆಗೆ ಕರ್ಫ್ಯೂ ಸಡಿಗೊಳಿಸಿದ ಪರಿಣಾಮ ನಿನ್ನೆಯಿಂದ ಜನರಿಲ್ಲದೆ ಬಿಕೋ ಎನ್ನುತ್ತಿದ್ದ ರಸ್ತೆಯಲ್ಲಿ ಜನಸಂಚಾರ ಕಾಣತೊಡಗಿತು. ಹಾಲಿಗಾಗಿ ಜನರು ಸರತಿ ಸಾಲಿನಲ್ಲಿ ನಿಂತ ದೃಶ್ಯ ಕಾಣತೊಡಗಿತು.
ಅಲ್ಲದೆ ಅಂಗಡಿ ಮುಗ್ಗಟ್ಟುಗಳ ಮುಂದೆ ಅಗತ್ಯ ವಸ್ತುಗಳಿಗಾಗಿ ಜನರ ಗುಂಪು ಕಾಣತೊಡಗಿತು. ಮಾರುಕಟ್ಟೆಯಲ್ಲಿ ತರಕಾರಿ ಹಣ್ಣು ಹಂಪಲುಗಳ ಖರೀದಿಗೆ ಹಾಗೂ ಮೋರ್ಗಳಂತಹ ಮಾಲ್ಗಳಲ್ಲಿಯೂ ದಿನನಿತ್ಯದ ಅಗತ್ಯ ವಸ್ತುಗಳಿಗಾಗಿ ಜನರು ಸರತಿ ಸಾಲಲ್ಲಿ ನಿಂತಿದ್ದ ದೃಶ್ಯ ಕಂಡು ಬಂತು. ಒಟ್ಟಿನಲ್ಲಿ ನಿನ್ನೆಯಿಂದ ಕರ್ಫ್ಯೂ ಹಿನ್ನೆಲೆಯಲ್ಲಿ ಜನರಿಗೆ ಅಗತ್ಯ ವಸ್ತುಗಳಿಲ್ಲದೆ ಪರದಾಡುತ್ತಿದ್ದ ಜನರಿಗೆ ಇಂದು ಉಸಿರು ಬಿಡುವಂತಾಯಿತು.