ಮಂಗಳೂರು: ವೃದ್ಧನ ಕೊಲೆ ಮಾಡಿ ಹೂತಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಐವರು ಆರೋಪಿಗಳನ್ನು ದೋಷಿಗಳು ಎಂದು ತೀರ್ಪು ಪ್ರಕಟಿಸಿದೆ. ಮಂಗಳೂರಿನ ಮಲಾರ್ ಗ್ರಾಮದಲ್ಲಿ ವೃದ್ಧನ ಕೊಲೆ ಮಾಡಲಾಗಿತ್ತು. ಈ ಸಂಬಂಧ ಐವರ ಮೇಲಿನ ಆರೋಪ ಸಾಬೀತಾಗಿದೆ.
ಎಲ್ಲ ಐವರು ಆರೋಪಿಗಳೂ ದೋಷಿ ಎಂದು ತೀರ್ಪು ನೀಡಿರುವ ನ್ಯಾಯಾಧೀಶ ಬಸಪ್ಪ ಬಾಳಪ್ಪ ಜಕಾತಿ, ಶಿಕ್ಷೆಯ ಪ್ರಮಾಣವನ್ನು 2023ರ ಮಾರ್ಚ್ 3ಕ್ಕೆ ಕಾಯ್ದಿರಿಸಿದ್ದಾರೆ. ಪಲ್ಲಿಯಬ್ಬ ಎಂಬ ವ್ಯಕ್ತಿಯನ್ನು ಮಲಾರ್ ಎಂಬಲ್ಲಿ ಹಣಕ್ಕಾಗಿ ಕತ್ತು ಹಿಸುಕಿ ಕೊಲೆ ಮಾಡಲಾಗಿತ್ತು. ಮೃತ ವ್ಯಕ್ತಿಯು ಕಾಣೆಯಾಗಿರುವ ಬಗ್ಗೆ ಕುಟುಂಬಸ್ಥರು ದೂರು ನೀಡಿದ್ದರು. ಇದರನ್ವಯ ಪೊಲೀಸರು ತನಿಖೆ ನಡೆಸಿದಾಗ ಪಲ್ಲಿಯಬ್ಬರನ್ನು ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.
ಮಲಾರ್ ಗ್ರಾಮದ ಅಕ್ಷರ ನಗರ ನಿವಾಸಿ ಹಂಝ ಅಬ್ಬಾಸ್ (44), ಅರ್ಫಾಝ್ ರಝಾಕ್ (20), ಮಲಾರ್ ಅರಸ್ತಾನ ಸೈಟ್ ನಿವಾಸಿ ಅಝರುದ್ದೀನ್ (27), ಸಜಿಪನಡು ಕಂಚಿನಡ್ಕಪದವು ನಿವಾಸಿಗಳಾದ ಅಮೀರ್ ಶೇಖ್ ಯಾನೆ ಅಮ್ಮಿ (26) ಹಾಗೂ ಅಥಾವುಲ್ಲ ಯಾನೆ ಅಲ್ತಾಫ್ ಅವರು ಅಪರಾಧಿಗಳು ಎಂದು ನ್ಯಾಯಾಲಯ ತೀರ್ಪು ನೀಡಿದೆ.
ಪಾವೂರು ಗ್ರಾಮದ ಮಲಾರ್‌ನಿಂದ ಪಲ್ಲಿಯಬ್ಬ ನಾಪತ್ತೆಯಾದ ಬಗ್ಗೆ ಕೊಣಾಜೆ ಠಾಣೆಯಲ್ಲಿ 2020ರ ಅಕ್ಟೋಬರ್ 29ರಂದು ನಾಪತ್ತೆ ದೂರು ದಾಖಲಾಗಿತ್ತು. ಬಳಿಕ ಪಲ್ಲಿಯಬ್ಬ ಅವರ ಮೃತದೇಹವು ಇರಾ ಗ್ರಾಮದ ಪದವು ಬಳಿ ಹೂತಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಹಣದ ವಿಚಾರದಲ್ಲಿ ಇವರನ್ನು ವ್ಯವಸ್ಥಿತವಾಗಿ ಹತ್ಯೆಗೈದು ಹೂತು ಹಾಕಲಾಗಿತ್ತು ಎಂಬುದು ಪೊಲೀಸರ ತನಿಖೆಯಿಂದ ತಿಳಿದುಬಂದಿತ್ತು. ಈ ಬಗ್ಗೆ ಕೊಣಾಜೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.
ಇದನ್ನೂ ಓದಿ: ಮಗಳ ಮೇಲೆ ಅತ್ಯಾಚಾರ ನಡೆಸಿದ ವ್ಯಕ್ತಿಗೆ 25 ವರ್ಷಗಳ ಜೈಲು ಶಿಕ್ಷೆ..!