ಮಂಗಳೂರು : ದ.ಕ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ ಕಂಡು ಬಂದಿಲ್ಲ. ಇಂದು 380 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಇಂದು ಒಟ್ಟು ಸೋಂಕಿತರ ಸಂಖ್ಯೆ 20 ಸಾವಿರದ ಗಡಿ ದಾಟಿದೆ. ಮತ್ತೆ ಇವತ್ತು ಆರು ಮಂದಿ ಬಲಿಯಾಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 482 ಆಗಿದೆ.
ಮಂಗಳೂರಿನ ಓರ್ವರು, ಪುತ್ತೂರಿನ ಇಬ್ಬರು, ಬೆಳ್ತಂಗಡಿಯ ಓರ್ವರು ಹಾಗೂ ಹೊರ ಜಿಲ್ಲೆಯ ಇಬ್ಬರು ಸೇರಿ ಇಂದು ಆರು ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಇವರೆಲ್ಲ ಸೋಂಕಿತರಾಗಿದ್ದು, ಒಂದಲ್ಲ ಒಂದು ರೋಗದಿಂದ ಬಳಲುತ್ತಿದ್ದರು.
ಹೊಸದಾಗಿ ಸೋಂಕಿತರಾಗಿರುವ 380 ಮಂದಿಯಲ್ಲಿ ಹೆಚ್ಚಿನವರು ಸಾಮಾನ್ಯ ಶೀತ ಲಕ್ಷಣ ಹೊಂದಿರುವವರಾಗಿದ್ದು, ಐಎಲ್ಐ ಪ್ರಕರಣದಲ್ಲಿ ಇಂದು 139 ಮಂದಿಗೆ ಸೋಂಕು ದೃಢಗೊಂಡಿದೆ. ಸೋಂಕಿತರ ಸಂಪರ್ಕದಲ್ಲಿದ್ದ 127 ಮಂದಿಗೆ, ತೀವ್ರ ಉಸಿರಾಟದ ತೊಂದರೆಯಲ್ಲಿ 8 ಮಂದಿಗೆ ಸೋಂಕು ದೃಢಪಟ್ಟಿದೆ ಹಾಗೂ 106 ಮಂದಿಯ ಸೋಂಕಿನ ಮೂಲ ಪತ್ತೆ ಹಚ್ಚಬೇಕಾಗಿದೆ.
ಮಂಗಳೂರಿನ 180, ಬಂಟ್ವಾಳದ 74, ಪುತ್ತೂರು 64, ಸುಳ್ಯ 12, ಬೆಳ್ತಂಗಡಿ 30, ಇತರ ಜಿಲ್ಲೆಗಳ 20 ಮಂದಿಗೆ ಸೋಂಕು ತಗುಲಿರೋದು ದೃಢಪಟ್ಟಿದೆ. ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 20,134ಕ್ಕೆ ಏರಿಕೆಯಾಗಿದೆ.
ಕೊರೊನಾ ಸೋಂಕಿತರಾಗಿ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 37 ಮಂದಿ ಹಾಗೂ ಹೋಮ್ ಐಸೋಲೇಷನ್ನಲ್ಲಿದ್ದ 316 ಮಂದಿ ಗುಣಮುಖರಾಗಿದ್ದಾರೆ. ಈ ಮೂಲಕ ರವಿವಾರ 353 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಇದರೊಂದಿಗೆ 15,101 ಮಂದಿ ಕೊರೊನಾ ಮುಕ್ತರಾಗಿ ಮನೆಗೆ ತೆರಳಿದ್ದಾರೆ.
ಆದರೂ ಜಿಲ್ಲೆಯಲ್ಲಿ 4,550 ಸಕ್ರಿಯ ಪ್ರಕರಣಗಳಿವೆ. ದ.ಕ.ಜಿಲ್ಲೆಯಲ್ಲಿ ಈವರೆಗೆ 1,38,188 ಮಂದಿಯ ಗಂಟಲು ದ್ರವ ಮಾದರಿ ತಪಾಸಣೆ ಮಾಡಲಾಗಿದೆ. ಅದರಲ್ಲಿ 1,18,054 ಮಂದಿಯಲ್ಲಿ ನೆಗೆಟಿವ್ ಬಂದಿವೆ. 20,134 ಮಂದಿಯಲ್ಲಿ ಸೋಂಕು ದೃಢಗೊಂಡಿದೆ.