ಬೆಳ್ತಂಗಡಿ/ಮಂಗಳೂರು: ಮಾಸ್ಕ್ ಹಾಗೂ ಹೆಲ್ಮೆಟ್ ಧರಿಸದೆ ಅನಗತ್ಯವಾಗಿ ವಾಹನದಲ್ಲಿ ಓಡಾಡುತ್ತಿದ್ದ ಬೈಕ್ ಸವಾರನೋರ್ವನನ್ನು ಪೊಲೀಸ್ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಆರೋಪದಲ್ಲಿ ಬಜ್ಪೆ ಠಾಣಾ ಪೊಲೀಸರು ಇಂದು ಬಂಧಿಸಿದ್ದಾರೆ.
ಬಡಗಗುಳಿಪಾಡಿ ಗ್ರಾಮದ ಸೂರಲ್ಪಾಡಿ ನಿವಾಸಿ ಅಬ್ದುಲ್ ಹಾಲಿಕ್(24) ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಆರೋಪಿ. ಈತ ಮಾಸ್ಕ್, ಹೆಲ್ಮೆಟ್ ಧಾರಣೆ ಮಾಡದೆ ಬಡಗಗುಳಿಪಾಡಿ ಗ್ರಾಮದ ಕೈಕಂಬದ ಬಳಿ ಬೈಕ್ ಚಲಾಯಿಸಿಕೊಂಡು ಬರುತ್ತಿದ್ದ. ಈ ಸಂದರ್ಭ ಕರ್ತವ್ಯನಿರತ ಬಜ್ಪೆ ಠಾಣಾ ಪೊಲೀಸರು ತಡೆದು ವಿಚಾರಣೆ ನಡೆಸಿದಾಗ, ಆರೋಪಿ ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ ಎನ್ನಲಾಗ್ತಿದೆ.
ಶುಕ್ರವಾರ ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6 ಗಂಟೆಯಿಂದ 9 ಗಂಟೆಯವರೆಗೆ ಮಾತ್ರ ಅವಕಾಶ ನೀಡಿದ್ದರೂ 10 ಗಂಟೆಯವರೆಗೂ ಪೇಟೆಯಲ್ಲಿ ವಾಹನ ಸಂಚಾರ ದಟ್ಟವಾಗಿತ್ತು. 10 ಗಂಟೆಯ ಬಳಿಕ ಬಂದ ಪ್ರತಿಯೊಂದು ವಾಹನಗಳನ್ನು ಪೊಲೀಸರು ತಪಾಸಣೆ ನಡೆಸಿ ಕಳುಹಿಸುತ್ತಿದ್ದಾರೆ.
ಅನಗತ್ಯವಾಗಿ ಬೈಕ್‌ನಲ್ಲಿ ತಿರುಗಾಡುತ್ತಿದ್ದವರ ಕೆಲವರಿಗೆ ಲಾಠಿ ರುಚಿ ತೋರಿಸುತ್ತಿದ್ದಾರೆ. ಕೋವಿಡ್ ನಿಯಮ ಉಲ್ಲಂಘಿಸಿದವರಿಗೆ ದಂಡವನ್ನೂ ವಿಧಿಸುತ್ತಿದ್ದಾರೆ. ಸಂಚಾರ ನಿಯಮಗಳನ್ನು ಉಲ್ಲಂಘಿಸಿದವರಿಗೆ ಹಾಗೂ ಮಾಸ್ಕ್ ಹಾಕದೆ ಸಂಚರಿಸುತ್ತಿದ್ದವರಿಂದ ದಂಡ ವಸೂಲಿ ಮಾಡುತ್ತಿದ್ದಾರೆ.
ಇದನ್ನೂ ಓದಿ: ಒಂದೇ ಗ್ರಾಮದಲ್ಲಿ 62ಕ್ಕೂ ಹೆಚ್ಚು ಜನರಿಗೆ ಕೊರೊನಾ: ಸೋಂಕಿತರೆಲ್ಲರೂ ವಲಸೆ ಕಾರ್ಮಿಕರು
ಶುಕ್ರವಾರ ಬೆಳ್ತಂಗಡಿ ಠಾಣೆಯಲ್ಲಿ 17 ವಾಹನವನ್ನು ಜಪ್ತಿ ಮಾಡಲಾಗಿದ್ದು, ಎರಡು ಅಂಗಡಿಗಳ ವಿರುದ್ಧ ಪ್ರಕರಣ ದಾಖಲಿಸಿ, 25 ಜನ ಮಾಸ್ಕ್ ಧರಿಸದವರಿಗೆ ದಂಡ ವಿಧಿಸಿದ್ದಾರೆ. ಧರ್ಮಸ್ಥಳ ಠಾಣೆಯಲ್ಲಿ ಒಂದು ಅಂಗಡಿ ವಿರುದ್ಧ ಪ್ರಕರಣ, 4 ವಾಹನ ಜಪ್ತಿ, 40 ಮಾಸ್ಕ್ ಧರಿಸದ ಪ್ರಕರಣ ದಾಖಲಾಗಿವೆ. ಪುಂಜಾಲಕಟ್ಟೆ ಠಾಣೆಯಲ್ಲಿ 6 ವಾಹನ ಜಪ್ತಿ, 15 ವಾಹನಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಬೆಳ್ತಂಗಡಿ ಸಂಚಾರಿ ಠಾಣೆಯಲ್ಲಿ 2 ವಾಹನಗಳನ್ನು ಜಪ್ತಿ ಮಾಡಲಾಗಿದೆ.