ಮಂಗಳೂರು: ಮಹಾನಗರ ಪಾಲಿಕೆ ಚುನಾವಣೆ ನಡೆಯುತ್ತಿದ್ದು, ವಿಧಾನ ಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಐವನ್ ಡಿಸೋಜ ಮತಗಟ್ಟೆಯಲ್ಲಿ ಮತಯಾಚನೆ ಮಾಡಿದರು ಎಂದು ಕೆಲ ಕಾಲ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ಮಧ್ಯೆ ವಾಗ್ವಾದ ನಡೆದಿದೆ.
ನಗರದ ಜೆಪ್ಪು ಇನ್ಫೆಂಟ್ ಮೇರಿ ಹೈಯರ್ ಪ್ರೈಮರಿ ಶಾಲೆಯ ಪ್ರವೇಶ ದ್ವಾರದಲ್ಲಿ ನಿಂತು ಐವನ್ ಡಿಸೋಜ ಅವರು, ಕಾಂಗ್ರೆಸ್ ಅಭ್ಯರ್ಥಿ ಪರ ಮತ ಚಲಾಯಿಸುವಂತೆ ಕೇಳಿದರೆನ್ನಲಾಗಿದೆ. ಇದಕ್ಕೆ ಬಿಜೆಪಿ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರಿಂದ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆದಿದೆ.
ಚುನಾಯಿತ ಪ್ರತಿನಿಧಿಯೊಬ್ಬರು ಮತಗಟ್ಟೆ ಬಳಿ ಹಾಜರಿದ್ದು, ಮತಯಾಚನೆ ಮಾಡಿದ್ದನ್ನು ವಿರೋಧಿಸಿದ ಬಿಜೆಪಿ ಕಾರ್ಯಕರ್ತರು, ಐವನ್ ಡಿಸೋಜ ವಿರುದ್ಧ ಗರಂ ಆದರು. ತಾವು ಕೂಡಾ ಮತದಾರರನ್ನು ಸೆಳೆಯಲು ತಮ್ಮ ಶಾಸಕರು ಹಾಗೂ ಸಂಸದರನ್ನು ಸ್ಥಳಕ್ಕೆ ಕರೆಯುತ್ತೇವೆ ಎಂದು ಬಿಜೆಪಿ ಕಾರ್ಯಕರ್ತರು ಗದ್ದಲ ಉಂಟು ಮಾಡಿದರು. ತಕ್ಷಣ ಮಧ್ಯ ಪ್ರವೇಶಿಸಿದ ಪೊಲೀಸರು ಮತದಾರರಿಗೆ ಮುಕ್ತವಾಗಿ ಮತಚಲಾಯಿಸುವಂತೆ ಅವಕಾಶ ಮಾಡಿ ಕೊಡಬೇಕು ಎಂದು ಎರಡೂ ಪಕ್ಷದವರನ್ನು ಸಮಾಧಾನಿಸಿದರು.