ಕಡಬ: ತಾಲೂಕು ತಹಶೀಲ್ದಾರರ ಕಚೇರಿಯ ಎದುರು ಕೋಟಿಗಟ್ಟಲೆ ಹಣ ವ್ಯಯಿಸಿ ಎಪಿಎಂಸಿ ನಿರ್ಮಿಸಿದ ಕಟ್ಟಡವೀಗ ಸಾರ್ವಜನಿಕರ ಉಪಯೋಗಕ್ಕೆ ಬರದೇ ಗಬ್ಬು ನಾರುತ್ತಿದೆ.
ನಗರದಲ್ಲಿ ಸಂತೆ ಮಾರುಕಟ್ಟೆ ನಡೆಸುವ ಸಲುವಾಗಿ ಈ ಕಟ್ಟಡ ನಿರ್ಮಿಸಲಾಗಿತ್ತು. ಆದರೀಗ ಕಟ್ಟಡ ಕಟ್ಟಿಗೆ ಸಂಗ್ರಹಿಸಿಡಲು, ಗುಜರಿ ವಸ್ತುಗಳನ್ನು ತಂದು ಹಾಕಲು ಬಳಕೆಯಾಗುತ್ತಿದೆ. ಇದರ ಸುತ್ತಲೂ ಕಾಡು ಆವರಿಸಿದೆ. ಚರಂಡಿ ವ್ಯವಸ್ಥೆ ನಿರ್ವಹಣೆ ಮಾಡದೇ ವಾಸನೆ ಬರುತ್ತಾ ಸೊಳ್ಳೆ ಉತ್ಪತ್ತಿ ಕೇಂದ್ರವಾಗಿದೆ.
ಅತ್ಯಾಧುನಿಕ ಸುಸಜ್ಜಿತ ಕಟ್ಟಡ ಇದ್ದರೂ ಕಡಬದ ಸಂತೆಗೆ ಬರುವ ವ್ಯಾಪಾರಿಗಳು ಭಾನುವಾರದ ಸಂತೆಯ ದಿನದಂದು ರಸ್ತೆ ಬದಿಯಲ್ಲೇ ವ್ಯಾಪಾರ ಮಾಡುತ್ತಾರೆ. ಈ ಕಟ್ಟಡದಲ್ಲಿ ವ್ಯಾಪಾರ ಮಾಡಲು ಎಪಿಎಂಸಿ ಹಾಗೂ ಸ್ಥಳೀಯ ಪಂಚಾಯತ್ ಅವಕಾಶ ಕಲ್ಪಿಸದಿರುವುದು ಇದಕ್ಕೆ ಕಾರಣ.
ಕೂಡಲೇ ಸಂಬಂಧಿಸಿದ ಇಲಾಖಾಧಿಕಾರಿಗಳು ಎಪಿಎಂಸಿ ಕಟ್ಟಡವನ್ನು ಉಳಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು ಅನ್ನೋದು ಸಾರ್ವಜನಿಕರ ಮನವಿ.