ಮಂಗಳೂರು(ದಕ್ಷಿಣ ಕನ್ನಡ):ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಆರೋಪಿ ಶಾರೀಕ್ ನನ್ನು ನಾವು ವಿಚಾರಣೆ ಮಾಡಿಲ್ಲ, ಹೇಳಿಕೆಯನ್ನೂ ಪಡೆದಿಲ್ಲ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.
ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಗಾಯಾಳುಗಳಾದ. ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಮತ್ತು ಆರೋಪಿ ಶಾರೀಕ್ ಚಿಕಿತ್ಸೆ ಪಡೆಯುತ್ತಿರುವ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು ಶಾರೀಕ್ಗೆ ಚಿಕಿತ್ಸೆ ಮುಂದುವರಿಸಲಾಗುತ್ತಿದೆ. ಪುರುಷೋತ್ತಮ್ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ. ಶಾರೀಕ್ನನ್ನು ನಾವು ವಿಚಾರಣೆ ಮಾಡಿಲ್ಲ, ಹೇಳಿಕೆಯನ್ನೂ ಪಡೆದಿಲ್ಲ ಎಂದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಊಹಾಪೋಹಗಳ ಸುದ್ದಿ ಹರಿದಾಡುತ್ತಿದೆ ಶಾರೀಕ್ನನ್ನು ಮಾತನಾಡುವುದಕ್ಕೆ ನಮಗೆ ಅವಕಾಶ ಇಲ್ಲ. ಬೆಂಕಿ ಸುಟ್ಟ ಗಾಯ ಆಗಿರೋದರಿಂದ ಸೋಂಕು ಬೇಗ ಹರಡುತ್ತದೆ. ಹೀಗಾಗಿ ವೈದ್ಯರ ಅಭಿಪ್ರಾಯದ ಪ್ರಕಾರ ಯಾರಿಗೂ ಶಾರೀಕ್ ಭೇಟಿಗೆ ಅವಕಾಶ ಇಲ್ಲ.
ವೈದ್ಯ ಸಿಬ್ಬಂದಿಗಳೂ ಸಂಪೂರ್ಣ ಸ್ಯಾನಿಟೈಸ್ ಆಗಿ ಶಾರೀಕ್ಗೆ ಚಿಕಿತ್ಸೆ ನೀಡುತ್ತಿದ್ದಾರೆ. ಹಿರಿಯ ಅಧಿಕಾರಿಗಳು ಬಂದಾಗಲೂ ಶಾರೀಕ್ ಭೇಟಿಗೆ ಅವಕಾಶ ಇಲ್ಲ. ಶಾರೀಕ್ ಮಾತನಾಡಲು ಸಂಪೂರ್ಣ ಶಕ್ತನಾದಾಗ ಆತನ ಹೇಳಿಕೆ ಪಡೆಯುತ್ತೇವೆ. ಶಾರೀಕ್ ಇರುವ ಕೊಠಡಿಗೆ ಪೊಲೀಸ್ ಭದ್ರತೆ ನೀಡಲಾಗಿದೆ. ಯಾವುದೇ ಆಚಾತುರ್ಯ ಆಗದಂತೇ ಸಂಪೂರ್ಣ ಭದ್ರತೆ ನೀಡುತ್ತಿದ್ದೇವೆ ಎಂದರು.
ಮೂರು ಶಿಫ್ಟ್ನಲ್ಲಿ ಪೊಲೀಸ್ ಸಿಬ್ಬಂದಿ ಭದ್ರತೆ ನೀಡುತ್ತಿದ್ದಾರೆ. ಶಾರೀಕ್ ಇರುವ ಕೊಠಡಿಗೆ ಯಾರಿಗೂ ಪ್ರವೇಶಕ್ಕೆ ಅನುಮತಿ ಇಲ್ಲ ಎಂದವರು ಹೇಳಿದರು.
ಇದನ್ನೂ ಓದಿ : ಮಂಗಳೂರು ಸ್ಫೋಟ: ಹೊಣೆ ಹೊತ್ತ ಸಂಘಟನೆ ಪೋಸ್ಟರ್ ವೈರಲ್, ಸತ್ಯಾಸತ್ಯತೆ ಪರಿಶೀಲನೆ ಎಂದ ಎಡಿಜಿಪಿ