ಮಂಗಳೂರು : ಸಿಸಿಬಿ ಹೆಸರಿನಲ್ಲಿ ನನ್ನ ಮಾಹಿತಿಯನ್ನು ಅಪರಿಚಿತರು ಪಡೆಯುತ್ತಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಅಖಿಲ ಭಾರತ ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಹೇಳಿದರು.
ಮಂಗಳೂರಿನಲ್ಲಿ ಮಾತನಾಡಿದ ಅವರು ಆಗಸ್ಟ್ 17 ರಂದು ರಾತ್ರಿ 9 ಗಂಟೆಗೆ ನನ್ನ ಹಿಂದಿನ ಕಾರು ಚಾಲಕ ಕಿರಣ್ ಎಂಬವರ ಮನೆಗೆ ಅಪರಿಚಿತರು ಬಂದು ಮಾಹಿತಿ ಪಡೆದಿದ್ದಾರೆ. ಅವರಲ್ಲಿ ಯಾರು ಎಂದು ಕಿರಣ್ ಅವರು ಪ್ರಶ್ನಿಸಿದಾಗ ಸಿಸಿಬಿಯವರು ಎಂದು ಹೇಳಿ ಬಂದೂಕು ತೋರಿಸಿ ಯಾರಿಗೂ ಹೇಳದಂತೆ ಬೆದರಿಸಿದ್ದಾರೆ. ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಣಿ ಕೊಲೆಗಳಾಗಿದ್ದು, ತಮಗೆ ಭದ್ರತೆ ನೀಡುವಂತೆ ಮನವಿ ನೀಡಿದ್ದೇನೆ. ಅಪರಿಚಿತರು ಹಿಂದೂಗಳಾಗಿದ್ದು, ಇದರಲ್ಲಿ ಯಾವ ಪಕ್ಷದ ಪಾತ್ರವಿದೆ ಎಂದು ಈಗ ಹೇಳಲಾಗದು. ಈ ಬಗ್ಗೆ ಪೊಲೀಸರು ಶೀಘ್ರ ಮಾಹಿತಿ ನೀಡಬಹುದು ಎಂದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಹಿಂದುಗಳಿಗೆ ಪ್ರಾಮುಖ್ಯತೆ ಇಲ್ಲದಂತಾಗಿದೆ. ಪ್ರಮೋದ್ ಮುತಾಲಿಕ್ ಅವರಿಗೆ ನೀಡಿದ ಓರ್ವ ಗನ್ ಮ್ಯಾನ್ಅನ್ನು ವಾಪಸ್ ಪಡೆಯಲಾಗಿದೆ. ಈಗಾಗಲೇ ಬಿಜೆಪಿ ಸರ್ಕಾರದ ಹಿಂದೂ ವಿರೋಧಿ ನೀತಿಯನ್ನು ವಿರೋಧಿಸಿ ನೀಡಿದ ಹೇಳಿಕೆಗಳು, ಎಸ್ಡಿಪಿಐ, ಪಿಎಫ್ಐ, ಕಾಂಗ್ರೆಸ್ ವಿರುದ್ಧ ನೀಡಿದ ಹೇಳಿಕೆಗಳ ಹಿನ್ನೆಲೆಯಲ್ಲಿ ಅಪರಿಚಿತರಿಂದ ನಮ್ಮ ಮಾಹಿತಿ ಸಂಗ್ರಹವಾಗಿರಬಹುದು ಎಂದು ಪವಿತ್ರನ್ ಶಂಕೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಮೊಟ್ಟೆ ಎಸೆದಿದ್ದಕ್ಕೆ ಮಡಿಕೇರಿ ಚಲೋ ಕೈಬಿಡಿ, ರಾಜ್ಯದ ಸಮಸ್ಯೆಗಳನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿ: ಹೆಚ್ ವಿಶ್ವನಾಥ್