ಮಂಗಳೂರು: ಲಕ್ಷ್ಮಣ ಸವದಿ ಬಿಜೆಪಿಗೆ ರಾಜೀನಾಮೆ ನೀಡುವ ವಿಚಾರಕ್ಕೆ ಮಂಗಳೂರಿನ ಕಟೀಲ್ನಲ್ಲಿ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ದುಡುಕುವ ಅವಶ್ಯಕತೆ ಇಲ್ಲ. ಮುಂದೆ ಅವರಿಗೆ ಒಳ್ಳೆಯ ಭವಿಷ್ಯವಿದೆ ಎಂದು ತಿಳಿಸಿದರು.
ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, "ನಾವೆಲ್ಲಾ ಪ್ರಯತ್ನ ಮಾಡಿದ್ದೇವೆ. ಪ್ರಯತ್ನಕ್ಕಿಂತ ಅವರೇ ಬಹಳ ಹಿರಿಯ ನಾಯಕರು. ಬಹಳ ನೋವಾಗುತ್ತದೆ, ಅವರು ದುಡುಕುವ ಅವಶ್ಯಕತೆ ಇಲ್ಲ. ಜೀವನದಲ್ಲಿ ಇಂತಹ ಘಟನೆಗಳು ಬಂದೇ ಬರುತ್ತದೆ. ನಾವು ಸ್ವಲ್ಪ ಸಂಯಮದಿಂದ ನಿರ್ಧಾರಕ್ಕೆ ಬರಬೇಕು. ಬಿಜೆಪಿಯಲ್ಲಿ ಒಳ್ಳೆ ಭವಿಷ್ಯವಿದೆ ಎಂದು ನಾನು ಹೇಳಬಯಸುತ್ತೇನೆ" ಎಂದರು.
ಬೊಮ್ಮಾಯಿ ಟೆಂಪಲ್ ರನ್: ನಿನ್ನೆ (ಬುಧವಾರ) ಕರಾವಳಿ ಜಿಲ್ಲೆಯಲ್ಲಿ ದೇವಸ್ಥಾನಗಳ ಭೇಟಿ ಆರಂಭಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಇಂದು ಕೂಡಾ ಮುಂದುವರೆಸಿದರು. ಬೆಳಗ್ಗೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತೆರಳಿದ ಬೊಮ್ಮಾಯಿ ದಂಪತಿ ಮಧ್ಯಾಹ್ನ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಆಗಮಿಸಿದರು.
ಕೊಲ್ಲೂರಿನಿಂದ ಹೆಲಿಕಾಪ್ಟರ್ ಮೂಲಕ ಮಂಗಳೂರಿನ ಮೇರಿಹಿಲ್ ಹೆಲಿಪ್ಯಾಡ್ನಲ್ಲಿ ಬಂದಿಳಿದ ಸಿಎಂ, ಹೆಲಿಪ್ಯಾಡ್ನಿಂದ ರಸ್ತೆ ಮಾರ್ಗದ ಮೂಲಕ ಮಂಗಳೂರು ತಾಲೂಕಿನ ಕಟೀಲು ದೇವಸ್ಥಾನಕ್ಕೆ ಆಗಮಿಸಿದರು. ದೇವಸ್ಥಾನದ ವತಿಯಿಂದ ಸ್ವಾಗತ ಕೋರಲಾಯಿತು. ದುರ್ಗಾಪರಮೇಶ್ವರಿ ದೇವಿಗೆ ಪತ್ನಿ ಜತೆಗೂಡಿ ಬೊಮ್ಮಾಯಿ ವಿಶೇಷ ಪೂಜೆ ಸಲ್ಲಿಸಿದರು.
ಅರ್ಚಕರು ಪ್ರಾರ್ಥನೆ ಸಲ್ಲಿಸಿ ಪ್ರಸಾದ ನೀಡಿ ಆಶೀರ್ವದಿಸಿದರು. ಮಲ್ಲಿಗೆ ಹಾರ, ಶಾಲು ಹೊದಿಸಿ ಮುಖ್ಯಮಂತ್ರಿಗೆ ಗೌರವಿಸಲಾಯಿತು. ಸಿಎಂ ದೇವಸ್ಥಾನದಲ್ಲಿಯೇ ಅನ್ನಪ್ರಸಾದ ಸ್ವೀಕರಿಸಿದರು. ಮೂಡಬಿದಿರೆ ಕ್ಷೇತ್ರದ ಅಭ್ಯರ್ಥಿ ಉಮನಾಥ್ ಕೋಟ್ಯಾನ್ ಅವರು ಮುಖ್ಯಮಂತ್ರಿಗಳನ್ನು ಭೇಟಿಯಾದರು.
ಇದನ್ನೂ ಓದಿ: ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥ ಸ್ವಾಮಿ ದರ್ಶನ ಪಡೆದ ಸಿಎಂ ಬೊಮ್ಮಾಯಿ